ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿ ಇರುವ ಸೌಲಭ್ಯಗಳು ದೊರೆಯಬೇಕು ಎಂದು ಕರ್ನಾಟಕ ಸರ್ಕಾರ ಶಿಕ್ಷಣ ಸುಧಾರಣೆಗಳ ಸಲಹೆಗಾರ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ. ಆರ್ ದೊರೆಸ್ವಾಮಿ ತಿಳಿಸಿದರು. ಪಿಇಎಸ್ ವಿಶ್ವವಿದ್ಯಾಲಯದಲ್ಲಿ 100 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿಲಾದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕರ್ನಾಟಕ ಸರ್ಕಾರ ಬಡವರ ಕನ್ನಡ ಶಾಲೆ ಮತ್ತು ಶ್ರೀಮಂತರ ಶಾಲೆಗಳ ಅಂತರವನ್ನು ಅಳಿಸಲು ಪೂರ್ಣ ಸನ್ನದ್ಧವಾಗಬೇಕಿದೆ ಎಂದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಹೈಟೆಕ್ ಪ್ರಯೋಗಾಲಯ ಸೌಲಭ್ಯ ದೊರೆಯಬೇಕಿದೆ. 40 ಸಾವಿರ ಸರ್ಕಾರಿ ಶಾಲೆಗಳಿದ್ದರೂ ಇನ್ನೂ ಈ ಸೌಲಭ್ಯ ದೊರೆತಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಶಾಲಾ ದತ್ತು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು. ಈ ಕಾರ್ಯಕ್ರಮವನ್ನು ವಿಸ್ತಾರಗೊಳಿಸಿ ಕರ್ನಾಟಕದ 70 ವಿಶ್ವವಿದ್ಯಾಲಯಗಳೂ ತಮ್ಮ ವ್ಯಾಪ್ತಿಗೆ ಒಳಪಟ್ಟ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಇಂತಹ ಮೇಳಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ನಾನೂ ಸರ್ಕಾರಿ ಶಾಲೆಯಲ್ಲಿ ಓದಿದವನು. ದೊರೆಸ್ವಾಮಿ ಸಹ ಓದಿದ್ದು ಸರ್ಕಾರಿ ಶಾಲೆಯಲ್ಲೇ. ಜ್ಞಾನಕ್ಕೆ ಖಾಸಗಿ ಅಥವಾ ಸರ್ಕಾರಿ ಶಾಲೆ ಎನ್ನುವ ತಾರತಮ್ಯವಿಲ್ಲ. ಜ್ಞಾನವಿರುವವರಿಗೆ ವಿಜ್ಞಾನ ಖಂಡಿತವಾಗಿ ಅರ್ಥವಾಗುತ್ತದೆ. ಸಾಧಕರು ಸಾಧನೆ ಮಾಡುತ್ತಾರೆ. ಉಳಿದವರು ಸೋಮಾರಿಗಳಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಭಾರತ ರತ್ನ ಪ್ರೊ. ಎನ್.ಆರ್. ರಾವ್, ಸಾಧನೆಗೆ ಬೇಕಾದ ಏಕಾಗ್ರತೆ, ನಾಯಕತ್ವ, ಸಮರ್ಪಣಾ ಭಾವ ಹಾಗೂ ಉನ್ನತಧ್ಯೇಯಗಳ ಕನಸುಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ : ಸರ್ಕಾರಿ ಶಾಲೆಗಳಿಗೆ ತಂತ್ರಜ್ಞಾನ ಸ್ಪರ್ಶ: ಸಚಿವ ಸುರೇಶ್ ಕುಮಾರ್