ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರಿಂದ ರೇಸ್ ವ್ಯೂ ಕಾಟೇಲ್-1ಅನ್ನು ವಾಪಸ್ ಪಡೆದು ಆ ನಿವಾಸವನ್ನು ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇಂದು ಆದೇಶ ಹೊರಡಿಸಿದೆ.
ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಅಶ್ವತ್ಥ ನಾರಾಯಣ್ ಅವರಿಗೆ ರೇಸ್ ವ್ಯೂ ಕಾಟೇಜ್-1 ಅನ್ನು ಹಂಚಿಕೆ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಅಶ್ವತ್ಥ ನಾರಾಯಣ್ ಅವರ ಅಧಿಕೃತ ನಿವಾಸವಾಗಿದ್ದ ರೇಸ್ ವ್ಯೂ ಕಾಟೇಜ್-1 ಇನ್ಮುಂದೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಲಿದೆ.
20 ತಿಂಗಳ ಕಾಲ ಬಿಜೆಪಿ ಸರ್ಕಾರದ ಅವಧಿ ಇದೆ. ಅಲ್ಲಿಯವರೆಗೂ ಸಿಎಂ ಬಸವರಾಜ ಬೊಮ್ಮಾಯಿ ಈ ನಿವಾಸದಲ್ಲೇ ಇರಲಿದ್ದಾರೆ. ಕುಟುಂಬ ಸದಸ್ಯರಿಗೆ ಇಷ್ಟವಿಲ್ಲದೇ ಇದ್ದರೂ ಸಿಎಂ ಅನಿವಾರ್ಯವಾಗಿ ಸರ್ಕಾರಿ ನಿವಾಸ ಪಡೆದುಕೊಳ್ಳುತ್ತಿದ್ದಾರೆ.
ಆರ್ ಟಿನಗರದಲ್ಲಿರುವ ಖಾಸಗಿ ನಿವಾಸ ಚಿಕ್ಕದಾಗಿದೆ. ಅತಿಥಿಗಳ ಭೇಟಿ, ರಾಜಕೀಯ ಚಟುವಟಿಕೆ, ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಸಮಸ್ಯೆಯಾಗುತ್ತಿದೆ. ಅಲ್ಲದೇ, ಕುಟುಂಬ ಸದಸ್ಯರಿಗೂ ನಿತ್ಯ ಕಿರಿಕಿರಿಯಾಗುತ್ತಿದೆ. ಹೀಗಾಗಿ, ಸಿಎಂ ಸರ್ಕಾರಿ ನಿವಾಸವನ್ನು ಪಡೆದುಕೊಳ್ಳುತ್ತಿದ್ದಾರೆ.
ಅಶ್ವತ್ಥ ನಾರಾಯಣ್ ನಿವಾಸವನ್ನು ಖಾಲಿ ಮಾಡುತ್ತಿದ್ದಂತೆ ಸಣ್ಣಪುಟ್ಟ ದುರಸ್ತಿ, ನವೀಕರಣ ಕಾರ್ಯ ನಡೆಸಿ ಆದಷ್ಟು ಬೇಗ ಸಿಎಂ ಬೊಮ್ಮಾಯಿ ಖಾಸಗಿ ನಿವಾಸದ ಬದಲು ರೇಸ್ ವ್ಯೂ ಕಾಟೇಜ್ನಿಂದಲೇ ತಮ್ಮ ಆಡಳಿತಕ್ಕೆ ಸಂಬಂಧಿಸಿದ ಕೆಲಸಗಳನ್ನ ನಿರ್ವಹಿಸಲಿದ್ದಾರೆ.
ಓದಿ: ತೆರಿಗೆ ವಂಚಿಸಿ ಒಂದೇ ನಂಬರ್ನಲ್ಲಿ ಸಂಚರಿಸುತ್ತಿದ್ದ ಮೂರು ಬಸ್ ಆರ್ಟಿಒ ವಶ