ಬೆಂಗಳೂರು : ಕೊರೊನಾ ಸೋಂಕು ಅವಾಂತರ ಸೃಷ್ಟಿಸಿದೆ. ಸೋಂಕು ಪೂರ್ಣ ಪ್ರಮಾಣದಲ್ಲಿ ತಗ್ಗಲು ಇನ್ನೂ ಸಮಯ ಬೇಕಿದೆ. ಅದರೊಂದಿಗೆ ಸುರಕ್ಷಿತ ರೀತಿಯಲ್ಲಿ ಬದುಕುವುದನ್ನ ಕಲಿಯಬೇಕಿದೆ. ಸದ್ಯ, ಕೊರೊನಾ ಸೋಂಕು ಇದ್ದರೂ, ಅದನ್ನು ಧೈರ್ಯದಿಂದ ಎದುರಿಸಿ ಭವಿಷ್ಯ ಕಟ್ಟಿಕೊಳ್ಳಬೇಕಿದೆ. ಮುಂದೂಡಲಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಇದೇ ತಿಂಗಳ ಜುಲೈ 19 ಮತ್ತು 22ರಂದು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಇದಕ್ಕೆ ಪರೀಕ್ಷಾ ಮಂಡಳಿಯು ಸಕಲ ಸಿದ್ಧತೆ ಮಾಡಿಕೊಂಡಿದೆ. ಸದ್ಯ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯುವುದೊಂದೇ ಬಾಕಿ ಇದೆ.
ಹೀಗಾಗಿ, ಸರ್ಕಾರ ಹಾಗೂ ಪರೀಕ್ಷಾ ಮಂಡಳಿ, ಶಿಕ್ಷಣ ಇಲಾಖೆ ಸೇರಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಈ ಕುರಿತು ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆ ಯಾವ ರೀತಿ ನಡೆಯಲಿದೆ, ಏನೆಲ್ಲ ಸುರಕ್ಷತೆ ಕ್ರಮ ಜರುಗಿಸಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.
ಅಸಾಧಾರಣ ಸ್ಥಿತಿಯಲ್ಲಿ ಪರೀಕ್ಷೆ ಬರೆದು ಸಮಾಜಕ್ಕೆ ಭರವಸೆ ನೀಡಿ-ಸುರೇಶ್ ಕುಮಾರ್
ಜುಲೈ19, 22 ಈ ಎರಡು ದಿನಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜೀವನದಲ್ಲಿ ವಿಶಿಷ್ಟವಾದ ದಿನ. ಅಸಾಧಾರಣ ಸನ್ನಿವೇಶದಲ್ಲಿ ಸಮಾಜಕ್ಕೆ ಭರವಸೆಯಾಗಿ ನೀವೂ ಪರೀಕ್ಷೆ ಬರೆಯಲು ಹೊರಟಿದ್ದೀರಿ. ನಿಮ್ಮ ಪೋಷಕ, ಪಾಲಕರು ವಿಶ್ವಾಸ ಇಟ್ಟು ಪರೀಕ್ಷೆ ಬರೆಯಲು ಕಳುಹಿಸುತ್ತಿದ್ದಾರೆ. ಹೀಗಾಗಿ, ಧೈರ್ಯದಿಂದ ಪರೀಕ್ಷೆ ಎದುರಿಸಿ ಅಂತಾ ಸಲಹೆ ನೀಡಿದರು.
ಮಕ್ಕಳೇ ಭಯ ಬೇಡ, ಬನ್ನಿ ಪರೀಕ್ಷಾ ಕೇಂದ್ರಕ್ಕೆ-ಆಯುಕ್ತ ಅನ್ಬುಕುಮಾರ್
ಆರು ವಿಷಯವನ್ನು, ಒಂದು ಪೇಪರ್ಗೆ ಮೂರು ವಿಷಯದಂತೆ ಪ್ರಶ್ನೆ ಪತ್ರಿಕೆ ತಯಾರಿ ಮಾಡಲಾಗಿದೆ. ಪರೀಕ್ಷಾ ಕೊಠಡಿಗೆ ಬರುವ ಮಕ್ಕಳಿಗಾಗಿ, ಸುರಕ್ಷತೆಗಾಗಿ ಸಂಪೂರ್ಣ ಸ್ಯಾನಿಟೈಸ್, ಮಾಸ್ಕ್ ವ್ಯವಸ್ಥೆ, ಶಿಕ್ಷಕರಿಗೆ ಕೋವಿಡ್ ಲಸಿಕೆ ಹೀಗೆಲ್ಲ ಉಪಕ್ರಮಗಳನ್ನ ಕೈಗೊಳ್ಳಲಾಗಿದೆ. ಮಕ್ಕಳು ಭಯವಿಲ್ಲದೇ ಬಂದು ಪರೀಕ್ಷೆ ಬರೆಯಬೇಕೆಂಬುದೇ ನಮ್ಮ ಇಚ್ಛೆ. ಪರೀಕ್ಷಾ ಕೇಂದ್ರ ಸಂಪೂರ್ಣ ಸುರಕ್ಷಿತವಾಗಿದ್ದು, ದಯವಿಟ್ಟು ನಿಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿಕೊಡಿ, ನಾವಿದ್ದೇವೆ ಅಂತಾ ಪೋಷಕರಿಗೆ ಮನವಿ ಮಾಡಿದರು.
ಮಕ್ಕಳೇ.. ಸರಳ ಹಾಗೂ ಬಹು ಆಯ್ಕೆ ಪ್ರಶ್ನೆ ಅಷ್ಟೇ ಕೇಳುವುದು - ಸುಮಂಗಲ
ಕೊರೊನಾ ಕಾರಣಕ್ಕೆ ಈ ವರ್ಷ ಪರೀಕ್ಷಾ ಮಾದರಿ ಬದಲಾಯಿಸಲಾಗಿದೆ. ಸರಳ ಹಾಗೂ ಬಹು ಆಯ್ಕೆ ಪ್ರಶ್ನೆಯನ್ನಷ್ಟೇ ಕೇಳಲಾಗುತ್ತದೆ. ಕಲಿತಿರುವುದನ್ನು ಮನನ ಮಾಡಿಕೊಂಡು ಅದಕ್ಕೆ ಉತ್ತರ ಕೊಟ್ಟರೆ ಸಾಕು. ಇಲ್ಲಿ ಅನ್ವಯಿಕ ಪ್ರಶ್ನೆಗಳು ಇರೋದಿಲ್ಲ. ಓಎಂಆರ್ ಸ್ವರೂಪದಲ್ಲಿ ಇದ್ದು, ಪುಟಗಟ್ಟಲೇ ಬರೆಯುವುದು ಇರೋದಿಲ್ಲ ಅಂತಾ ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕಿ ಸುಮಂಗಲಾ ತಿಳಿಸಿದರು. ಮಾದರಿ ಪ್ರಶ್ನೆಪ್ರತಿಕೆ, ಮಾದರಿ ಓಎಂಆರ್ ಶೀಟ್ ಎಲ್ಲವನ್ನೂ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಬರೆಯಲು ಯಾವುದೇ ಆತಂಕ ಬೇಡ, ಮಂಡಳಿ ನಿಮ್ಮ ಜೊತೆಗೆ ಇದ್ದು ಸುಲಭ, ಸರಳ ಎನ್ನಿಸುವಂತಹ ಪರೀಕ್ಷಾ ಪ್ರಕ್ರಿಯೆ ಇರಲಿದೆ. ನಾವೆಲ್ಲರೂ ಸನ್ನದ್ಧರಾಗಿದ್ದು, ನೀವೂ ಬಂದು ಪರೀಕ್ಷೆ ಬರೆಯಿರಿ ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ: ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಜಿ.ಮಾದೇಗೌಡ ಚೇತರಿಕೆ: ಆಸ್ಪತ್ರೆಯಲ್ಲಿ ಬರ್ತ್‌ಡೇ ಆಚರಣೆ