ಬೆಂಗಳೂರು : ಕೊರೊನಾ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಬಗ್ಗೆ ಪ್ರತಿ ಪಕ್ಷಗಳ ಆರೋಪ ಆಧಾರ ರಹಿತವಾಗಿದೆ. ಹಾಗಾಗಿ ನ್ಯಾಯಾಂಗ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸರ್ಕಾರ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರ ನಾಯಕರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಆರೋಪ ಸತ್ಯಕ್ಕೆ ದೂರವಾಗಿದೆ. ಸರ್ಕಾರದಿಂದ ಎಳ್ಳಷ್ಟು ಲೋಪವಾಗಿಲ್ಲ. ಈ ಶತಮಾನದ ಮಾರಣಾಂತಿಕ ಕಾಯಿಲೆಯಾದ ಕೊರೊನಾ ನಿಯಂತ್ರಣಕ್ಕೆ ವಿರೋಧ ಪಕ್ಷಗಳು ಸೇರಿದಂತೆ ರಾಜ್ಯದ ಜನರ ಸಹಕಾರ ಕೋರುತ್ತೇವೆ ಎಂದರು.
ಮೊದಲು ಕೋವಿಡ್ ಗೆಲ್ಲೋಣ. ಜೀವ ರಕ್ಷಿಸೋಣ. ನಾವಿನ್ನೂ ಯುದ್ಧದ ನಡುವೆ ಇದ್ದೇವೆ. ಕೋವಿಡ್ ಬಂದವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸರ್ಕಾರ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳನ್ನು ಪ್ರಶಂಸಿಸುವುದು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ. ಈ ಸಂದರ್ಭದಲ್ಲಿ ಎಲ್ಲರೂ ರಾಜಕಾರಣ ಬಿಟ್ಟು ಕೆಲಸ ಮಾಡೊಣ ಎಂದರು.
ರಾಜ್ಯದಲ್ಲಿ ಕೊರೊನಾ ಬಂದ ನಂತರ ಇದುವರೆಗೆ 4,200 ಕೋಟಿ ರೂ. ವೆಚ್ಚವಾಗಿದೆ. 15 ವಿವಿಧ ಇಲಾಖೆಗಳು ಸಾಮಗ್ರಿಗಳನ್ನು ಖರೀದಿ ಮಾಡಿವೆ. ಅದರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಬಗ್ಗೆ ಹೆಚ್ಚು ಆರೋಪ ಕೇಳಿ ಬಂದಿದೆ. ಆರೋಗ್ಯ ಇಲಾಖೆ 1,142 ಕೋಟಿ ರೂ. ವೆಚ್ಚ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ 76 ಕೋಟಿ ಖರ್ಚು ಮಾಡಿದೆ. ಕೊರೊನಾಕ್ಕೆ ಸಂಬಂಧ ಪಟ್ಟಂತೆ ಉಪಮುಖ್ಯಮಂತ್ರಿ ಸಚಿವರನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿತ್ತು. ಅಲ್ಲದೇ ಬೇಡಿಕೆ ಸಮಿತಿ, ಪರಿಣಿತರ ಸಮಿತಿ, ಬೆಲೆ ನಿಗದಿ ಸಮಿತಿ ದರ ಕಡಿತಗೊಳಿಸುವ ಸಮಿತಿ ರಚಿಸಲಾಗಿತ್ತು ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯ ಪರಿಣಿತರ ಸಮಿತಿ ರಚಿಸಿದ್ದು, ಡೆತ್ ಆಡಿಟ್ ಮಾಡಿ ಕಳುಹಿಸುತ್ತಾರೆ. ಕೋವಿಡ್‍ನಿಂದ ಸತ್ತವರನ್ನು ಕೋವಿಡೇತರ ಎಂದು ಪರಿಗಣಿಸಿಲ್ಲ. ಹೃದ್ರೋಗದಿಂದ ಶೇ. 20, ಕ್ಯಾನ್ಸರ್ನಿಂದ ಶೇ. 6, ಕ್ಷಯ ರೋಗದಿಂದ ಶೇ 3.7, ಉಸಿರಾಟದ ತೊಂದರೆಯಿಂದ 3.9 ರಷ್ಟು, ಕಾರಣವಿಲ್ಲದ ಜ್ವರದಿಂದ 3.2, ಅಪಘಾತದಿಂದ ಶೇ 3ರಷ್ಟು ಮಂದಿ ಮೃತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
6,671 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಆರಂಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ತೊಂದರೆ ಇತ್ತು. ಕೆಲವೇ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಂಡ ನಂತರ ಈಗ ಚಿಕಿತ್ಸೆ ದೊರೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ಈ ವೇಳೆ, ಕಾಂಗ್ರೆಸ್ ಸದಸ್ಯರು ಪದೇ ಪದೆ ಆಕ್ಷೇಪಿಸಿ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕೋವಿಡ್ ಕೇರ್ ಸೆಂಟರ್ಗೆ ಸಂಬಂಧಿಸಿದಂತೆ 200 ಕೋಟಿ ರೂ. ಅವ್ಯವಹಾರದ ಆರೋಪ ಮಾಡಾಗಿದೆ ಎಂದು ಆಕ್ಷೇಪಿಸಿದರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಭ್ರಷ್ಟಾಚಾರ ಆಗಿದೆ ಎಂದು ನಾವು ಹೇಳುತ್ತಿದ್ದೇವೆ. ನೀವು ಇಲ್ಲ ಎನ್ನುತ್ತಿದ್ದೀರಿ. ಕೋವಿಡ್ ಕೇರ್ ಸೆಂಟರ್‌ನಲ್ಲಿ 10 ಸಾವಿರ ಹಾಸಿಗೆ ವ್ಯವಸ್ಥೆ ಮಾಡುವ ಉದ್ದೇಶವಿತ್ತು. 800 ರೂ. ಬಾಡಿಗೆ ನಿಗದಿ ಮಾಡುವ ವಿಚಾರ ಗೊತ್ತಾಗಿದ್ದರಿಂದ ಭ್ರಷ್ಟಾಚಾರ ಆಗಿದೆ ಎಂದು ಹೇಳುತ್ತಿದ್ದೇವೆ ಎಂದರು. ಆ ಸಂದರ್ಭದಲ್ಲಿ ಮಾತಿನ ವಾಗ್ವಾದ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್ ಅವರು ಟೆಂಡರ್ ಕರೆಯುವ ಮುನ್ನವೇ ಆರೋಪ ಮಾಡಿದರೆ ಹೇಗೆ?. ಸಮಿತಿಯಲ್ಲಿ ಯಾರೋ ಹೇಳಿದರೆ ಸರ್ಕಾರ ಒಪ್ಪಬೇಕಲ್ಲವೇ ಎಂದು ಮರು ಪ್ರಶ್ನೆ ಹಾಕಿದರು.
ಪ್ರಿಯಾಂಕಾ ಖರ್ಗೆ, ಸೌಮ್ಯ ರೆಡ್ಡಿ, ತುಕರಾಂ, ಡಾ. ಯತೀಂದ್ರ ಮತ್ತಿತರ ಸದಸ್ಯರು ಕೋವಿಡ್ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವೈದ್ಯಕೀಯ ಉಪಕರಣಗಳಲ್ಲಿ ಅವ್ಯವಹಾರ ನಡೆದಿಲ್ಲ ಎಂದರೆ ಮುಚ್ಚಿಡುವುದೇಕೆ?. ಹೈಕೋರ್ಟ್ನ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯ ಹೊರಬರುತ್ತದೆ ಎಂದು ಒತ್ತಾಯಿಸಿದರು. ಇದಕ್ಕೆ ಸರ್ಕಾರ ಒಪ್ಪದಿದ್ದಾಗ, ಸರ್ಕಾರದ ಉತ್ತರ ನಮಗೆ ತೃಪ್ತಿ ತಂದಿಲ್ಲ ಎಂದು ಹೇಳಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.