ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 1229 ಆಶಾ ಕಾರ್ಯಕರ್ತೆಯರು ಎನ್ಯುಎಚ್ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಜನಸಂಖ್ಯೆಗೆ ಆಧಾರವಾಗಿ ಹೊಸದಾಗಿ 1322 ಆಶಾ ಕಾರ್ಯಕರ್ತೆಯರ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ.
5 ಸಾವಿರ ಜನರಿಗೆ ಒಬ್ಬರಂತೆ, 1,27,56,029 ಜನರಿಗೆ 2551 ಆಶಾ ಕಾರ್ಯಕರ್ತೆಯರು ನಗರಕ್ಕೆ ಅಗತ್ಯವಿದೆ. ತಾಯಿ ಆರೋಗ್ಯ, ಮಕ್ಕಳ ಆರೋಗ್ಯ, ಕುಟುಂಬ ಕಲ್ಯಾಣ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಆರೋಗ್ಯ ಸೇವೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಆಶಾ ಕಾರ್ಯಕರ್ತೆಯರ ನೇಮಕಕ್ಕೆ ಅನುಮತಿ ನೀಡಿದೆ.
ಬೆಂಗಳೂರು ಸೇರಿದಂತೆ ಒಟ್ಟು 11 ಮಹಾನಗರ ಪಾಲಿಕೆಗಳಿಗೆ 1786 ಆಶಾ ಕಾರ್ಯಕರ್ತೆಯರನ್ನು ವಾರ್ಷಿಕ ಮೊತ್ತ 23.58 ಕೋಟಿ ರೂ. ವೆಚ್ಚದಲ್ಲಿ ನೇಮಕ ಮಾಡಿಕೊಳ್ಳಲು ಸೂಚಿಸಿದೆ. ನಾಲ್ಕು ಸಾವಿರ ಮಾಸಿಕ ಗೌರವ ಧನ, 2 ಸಾವಿರ ಪ್ರೋತ್ಸಾಹ ಧನ ಹಾಗೂ ವಿವಿಧ ಐದು ಸಾವಿರ ಪ್ರೋತ್ಸಾಹ ಧನ ಸೇರಿ ಒಟ್ಟು 23.58 ಕೋಟಿ ಅನುದಾನ ಮೀಸಲಿಡಲಾಗಿದೆ.