ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆ ಸರ್ಕಾರ ಕೆಲ ವಲಯಗಳಿಗೆ ಸಡಿಲಿಕೆ ನೀಡಲು ಪ್ರಾರಂಭಿಸಿದೆ. ಅದರಂತೆ ರಾಜ್ಯಾದ್ಯಂತ ಉಪನೋಂದಣಿ ಕಚೇರಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿದೆ. ಇತ್ತ ರಾಜ್ಯ ಸರ್ಕಾರ ಲಾಕ್‌ಡೌನ್‌ನ ಜೂನ್ 14ರವರೆಗೆ ವಿಸ್ತರಿಸಿದೆ. ಆದರೆ, ಪ್ರಕರಣಗಳಲ್ಲಿ ಇಳಿಕೆ ಕಾಣುತ್ತಿರುವ ಹಿನ್ನೆಲೆ ಕೆಲ ವಲಯಗಳಿಗೆ ನಿರ್ಬಂಧಿತ ಸಡಿಲಿಕೆ ನೀಡಲು ಮುಂದಾಗುತ್ತಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಉಪನೋಂದಣಿ ಕಚೇರಿಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ. ಕೋವಿಡ್ ಸುರಕ್ಷತಾ ಮಾರ್ಗಸೂಚಿ ಪಾಲನೆಯೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಮೇ ತಿಂಗಳಲ್ಲಿ ಲಾಕ್‌ಡೌನ್ ಹೇರಿದ ಬಳಿಕ ಎಲ್ಲಾ 243 ಉಪನೋಂದಣಿ ಕಚೇರಿಗಳ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಕೋವಿಡ್ ಅಬ್ಬರ ಕಡಿಮೆಯಾದ ಹಿನ್ನೆಲೆ ಉಪನೋಂದಣಿ ಕಚೇರಿಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ.
ಸರ್ಕಾರದ ಆದಾಯದ ಮೂಲಗಳಲ್ಲಿ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಪ್ರಮುಖವಾಗಿದೆ. ಹೀಗಾಗಿ, ಸರ್ಕಾರ ಉಪನೋಂದಣಿ ಕಚೇರಿಗಳ ಪುನಾರಂಭಿಸುವಂತೆ ಆದೇಶಿಸಲಾಗಿದೆ.