ಬೆಂಗಳೂರು : ರಾಜ್ಯದಲ್ಲಿ ನಾವಿನ್ಯತಾ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು ಹಾಗೂ ಅದನ್ನು ನಿಯಂತ್ರಿಸಲು ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ವಿಧೇಯಕ 2020 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಕರ್ನಾಟಕ ನಾವಿನ್ಯತಾ ಉತ್ಪನ್ನಗಳು ಮತ್ತು ಸೇವೆಗಳ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಕರ್ನಾಟಕವು ಜಾಗತಿಕ ನಾವಿನ್ಯತಾ ಕೇಂದ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ರಾಜ್ಯವೇ ನಾವಿನ್ಯತಾ ತಂತ್ರಜ್ಞಾನದಲ್ಲಿ ಮೊದಲ ಸ್ಥಾನದಲ್ಲಿದೆ. ಹೀಗಾಗಿ, ನಾವಿನ್ಯತೆ ಮತ್ತು ನವೋದ್ಯಮ ಶೀಲತೆಯನ್ನು ಪ್ರೋತ್ಸಾಹಿಸಲು ಸರ್ಕಾರ ನಾವಿನ್ಯತಾ ಪ್ರಾಧಿಕಾರದ ಸ್ಥಾಪನೆಗೆ ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ನಾವಿನ್ಯತೆಯನ್ನು ಸಶಕ್ತಗೊಳಿಸಲು ಹಾಗೂ ನಿಯಂತ್ರಿಸಲು ಒಂದು ಕಾನೂನಿನ ಚೌಕಟ್ಟಿನ ಅಗತ್ಯ ಇದೆ. ಈ ನಿಟ್ಟಿನಲ್ಲಿ ನಿಯಂತ್ರಣದ ತಾಂತ್ರಿಕ ವೇದಿಕೆಗಳನ್ನು ರಚಿಸಲು ಈ ವಿಧೇಯಕ ಮಂಡಿಸಲಾಗಿದೆ.
ಕರ್ನಾಟಕ ನಾವಿನ್ಯತಾ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಇರಲಿದ್ದು, ಐಟಿ, ಬಿಟಿ ಸಚಿವರು ಉಪಾಧ್ಯಕ್ಷರಾಗಿ ಇರಲಿದ್ದಾರೆ. ಐವರು ನಾಮನಿರ್ದೇಶಿತರು ಸದಸ್ಯರು, ಐಟಿ, ಬಿಟಿ ಇಲಾಖೆಯ ಕಾರ್ಯದರ್ಶಿ ಸದಸ್ಯರಾಗಿ, ಐಟಿ, ಬಿಟಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಇರಲಿದ್ದಾರೆ.