ಬೆಂಗಳೂರು: ಈಗಾಗಲೇ ಸಲೂನ್ ಮತ್ತು ಬ್ಯೂಟಿ ಪಾರ್ಲರ್ಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರ ಸಲೂನ್ಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಮಾರ್ಗಸೂಚಿಯನ್ನು ಹೊರಡಿಸಿದೆ.
ಅದರಂತೆ ಸಲೂನ್, ಬ್ಯೂಟಿ ಪಾರ್ಲರ್ ಗಳು ಜ್ವರ, ಶೀತ, ಕೆಮ್ಮು, ಗಂಟಲು ನೋವು ಇರುವ ಗ್ರಾಹಕರನ್ನು ಒಳ ಪ್ರವೇಶಕ್ಕೆ ಬಿಡಬಾರದು. ಮಾಸ್ಕ್ ಹಾಕದ ಗ್ರಾಹಕರಿಗೆ ಪ್ರವೇಶ ನಿಷೇಧಿಸಬೇಕು. ಇನ್ನು ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.
ಯಾವಾಗಲೂ ಸಿಬ್ಬಂದಿ ಮಾಸ್ಕ್, ತಲೆಗೆ ಟೋಪಿ ಕಡ್ಡಾಯವಾಗಿ ಹಾಕಬೇಕು. ಪ್ರತಿಯೊಬ್ಬ ಗ್ರಾಹಕನಿಗೂ ಪ್ರತ್ಯೇಕವಾಗಿ ಬಳಸಿ ಎಸೆಯಬಹುದಾದ ಟವೆಲ್, ಪೇಪರ್ ಶೀಟ್ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕನಿಗೂ ಬಳಕೆ ಮಾಡಿದ ಸಾಧನವನ್ನು 30 ನಿಮಿಷಗಳ ಕಾಲ ಶೇ.7 ರ ಲೈಸೋಲ್ ಬಳಸಿ ಸೋಂಕು ನಿವಾರಿಸಬೇಕು. ಈ ಹಿನ್ನೆಲೆ ಹೆಚ್ಚುವರಿ ಸಾಧನ ಬಳಸುವಂತೆ ನಿರ್ದೇಶನ ನೀಡಲಾಗಿದೆ.
- ಪ್ರತಿ ಗ್ರಾಹಕನ ಹೇರ್ ಕಟ್ ಮಾಡಿದ ಬಳಿಕ ಕೈ ಸ್ಯಾನಿಟೈಸ್ ಮಾಡಬೇಕು
- ಹೆಚ್ಚಿನ ಜನಸಂದಣಿ ತಪ್ಪಿಸಲು ಟೋಕನ್ ವ್ಯವಸ್ಥೆ
- ಆಸನಗಳ ಮಧ್ಯೆ ಒಂದು ಮೀಟರ್ ಅಂತರ
- ಮಳಿಗೆಯನ್ನು ಸ್ವಚ್ಚಗೊಳಿಸುತ್ತಿರಬೇಕು
- ಮಳಿಗೆಯ ಮೆಟ್ಟಿಲು, ನೆಲ, ಲಾಂಜ್, ಲಿಫ್ಟ್, ಕೈಹಿಡಿಕೆಗಳನ್ನು ದಿನಕ್ಕೆ ಎರಡು ಬಾರಿ ಶೇ.1ರ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಮೂಲಕ ಸೋಂಕು ನಿವಾರಿಸಬೇಕು ಎಂದು ಸೂಚಿಸಲಾಗಿದೆ.