ಬೆಂಗಳೂರು: ಲಾಕ್ಡೌನ್ನಿಂದ ಆರ್ಥಿಕವಾಗಿ ಕಂಗೆಟ್ಟಿದ್ದ ಸರ್ಕಾರ ಬಿಡಿಎ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿದೆ. ಅದರ ಒಂದು ಭಾಗ ಬಿಡಿಎ ಬಡಾವಣೆಯಲ್ಲಿನ ಅಕ್ರಮ ಆಸ್ತಿಗಳ ಸಕ್ರಮ ಯೋಜನೆ. ಆದರೆ, ಈ ಅಕ್ರಮ ಸಕ್ರಮ ಯೋಜನೆ ಜಾರಿಗೆ ಕಾನೂನಿನ ತೊಡಕೇ ಅಡ್ಡಲಾಗಿ ಪರಿಣಮಿಸಿದೆ.
ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸರ್ಕಾರ ತನ್ನ ಬೊಕ್ಕಸ ತುಂಬಿಸಿ ಕೊಳ್ಳಲು ನಾನಾ ಕಸರತ್ತು ನಡೆಸುತ್ತಿದೆ. ಮೊದಲಿಗೆ ಸರ್ಕಾರ ಆದಾಯ ಸಂಗ್ರಹಕ್ಕಾಗಿ ಬಿಡಿಎಯತ್ತ ನಿರೀಕ್ಷೆಯ ಕಣ್ಣಿಟ್ಟಿದೆ. ಅದರಂತೆ ಬಿಡಿಎ ಬಡಾವಣೆಯಲ್ಲಿರುವ 12,000 ಕಾರ್ನರ್ ಸೈಟ್‌ನ್ನು ಹರಾಜು ಹಾಕಿ ಸುಮಾರು 15,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಿದೆ. ಜೊತೆಗೆ ಬಿಡಿಎ ವಿವಿಧ ಬಡಾವಣೆಗಳಲ್ಲಿರುವ ಸುಮಾರು 75,000 ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿ ಆದಾಯ ಸಂಗ್ರಹಿಸಲು ಮುಂದಾಗಿದೆ. ಬಿಡಿಎ ಮೂಲಕ ಸುಮಾರು 40,000 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ, ವಾಸ್ತವದಲ್ಲಿ ಬಿಡಿಎಯಿಂದ ಇಷ್ಟು ದೊಡ್ಡ ಪ್ರಮಾಣದ ಆದಾಯ ಸಂಗ್ರಹ ವಾಸ್ತವ್ಯಕ್ಕೆ ದೂರವಾದದು ಎಂಬುದು ಸರ್ಕಾರಕ್ಕೆ ಅರಿವಾಗುತ್ತಿದೆ.
ಬಿಡಿಎ ಅಕ್ರಮ ಸಕ್ರಮಕ್ಕೆ ಕಾನೂನು ತೊಡಕಿನ ಆತಂಕ:
ಈಗಾಗಲೇ ಬಿಡಿಎ ಬಡಾವಣೆಗಳಲ್ಲಿನ ಅಕ್ರಮ ಆಸ್ತಿಗಳ ಸಕ್ರಮಕ್ಕಾಗಿ ಸಂಪುಟ ಉಪಸಮಿತಿ ಸಭೆ ನಡೆಸಿದ್ದರೂ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.
ಕಳೆದ ಬಾರಿ ಸಿಎಂ ನೇತೃತ್ವದಲ್ಲೇ ಈ ಸಂಬಂಧ ಸಭೆ ನಡೆಸಲಾಗಿತ್ತು. ಆದರೆ, ಈ ಸಭೆಯಲ್ಲಿ ಅಕ್ರಮ ಸಕ್ರಮಕ್ಕಾಗಿ ಕಾನೂನು ತೊಡಕಿನ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈಗಾಗಲೇ ಬಿಡಿಎ ನಿವೇಶನಗಳಲ್ಲಿನ ಅಕ್ರಮ ಕಟ್ಟಡಗಳ ಸಂಬಂಧ ಹಲವು ನಿವೇಶನ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗೆ ಸಾವಿರಾರು ನಿವೇಶನಗಳ ಮೇಲೆ ಕಾನೂನು ಹೋರಾಟ ನಡೆಯುತ್ತಿದೆ. ಬಿಡಿಎ ಬಡಾವಣೆಯಲ್ಲಿನ ಅಕ್ರಮ ಕಟ್ಟಡಗಳ ಸಕ್ರಮ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂದು ಕಾನೂನು ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮ ಸಕ್ರಮ ಯೋಜನೆಗೆ ಎದುರಾಗಿರುವ ಕಾನೂನು ತೊಡಕು ಇಲ್ಲೂ ಬರಲಿದೆ. ಈ ಯೋಜನೆ ವಿರುದ್ಧ ಹಲವರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಯಾರಾದರೂ ಕೋರ್ಟ್ ಮೆಟ್ಟಿಲೇರಿದರೆ ಬಿಡಿಎ ಅಕ್ರಮ ಸಕ್ರಮ ಯೋಜನೆಯ ಅನುಷ್ಠಾನವೇ ಅಸಾಧ್ಯವಾಗಲಿದೆ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಈ ಮೂಲಕ ಆದಾಯ ಬರುವುದು ಕಷ್ಟಸಾಧ್ಯ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಇದರ ಕಡತ ನಗರಾಭಿವೃದ್ಧಿ ಇಲಾಖೆಯ ಬಳಿ ಇದ್ದು, ಇದರ ಸಾಧಕ ಬಾಧಕ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದಂಡದ ಮೊತ್ತದ ಬಗ್ಗೆನೂ ಪರಿಶೀಲನೆ ನಡೆಸುತ್ತಿದ್ದು, ಬಳಿಕ ಸಂಪುಟ ಸಭೆಯ ಮುಂದೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
10,000 ಕೋಟಿ ರೂ. ಆದಾಯ ನಿರೀಕ್ಷೆ:
ಈ ಅಕ್ರಮ ಸಕ್ರಮದಿಂದ ಸುಮಾರು 10,000 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿ ಬಿಡಿಎ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಷ್ಟೊಂದು ಹಣ ಸಂಗ್ರಹ ಅನುಮಾನ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆ ಜನರ ಬಳಿಯೂ ಹಣದ ಕೊರತೆ ಇದೆ. ಹೀಗಾಗಿ ಬಿಡಿಎ ದಂಡ ವಿಧಿಸುವ ಮೊತ್ತವನ್ನೂ ಜನರಿಗೆ ಭರಿಸಲು ಸಾಧ್ಯವಿಲ್ಲ. ಬಿಡಿಎ ಅಕ್ರಮ ನಿವೇಶನಗಳ ಬಗ್ಗೆ ಹೋರಾಟ ನಡೆಸಿರುವ ಆರ್ಟಿಐ ಕಾರ್ಯಕರ್ತ ಶಿವಕುಮಾರ್ ಬಿಡಿಎ ಅಕ್ರಮ ಸಕ್ರಮ ಯೋಜನೆ ಜಾರಿಗೆ ತರುವುದು ಕಬ್ಬಿಣದ ಕಡಲೆಯಂತೆ. ಕೂಲಂಕಷವಾಗಿ ಪರಿಶೀಲನೆ ಬಳಿಕವಷ್ಟೇ ಜಾರಿಗೆ ತರಬಹುದು. ಆದರೂ ಈ ಬಗ್ಗೆ ಕಾನೂನು ತೊಡಕು ಬರಲಿದೆ. ಹೀಗಾಗಿ ಕೂಡಲೇ ಸರ್ಕಾರಕ್ಕೆ ಈ ಯೋಜನೆಯಿಂದ ಆದಾಯ ಬರುತ್ತದೆ ಎಂಬುದು ಕನಸಿನ ಮಾತು ಎಂದು ಸ್ಪಷ್ಟಪಡಿಸಿದ್ದಾರೆ.