ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ಜನರು ಮಾತ್ರ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚಳಕ್ಕೆ ಸರ್ಕಾರ ಕಾರಣವಲ್ಲ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ನನ್ನ ಮತಕ್ಷೇತ್ರದಲ್ಲಿ ಪ್ರತಿ ಬೂತ್ನ ಪ್ರತಿ ಮನೆಗೂ ಹೋಗಿ ಔಷಧಿ ಸೇರಿ ಇತರೆ ನೆರವುಗಳನ್ನು ನೀಡಿದ್ದೇನೆ. ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲೂ ಮಾಸ್ಕ್ ವಿತರಿಸಿದ್ದೇವೆ ಹಾಗೂ ಪ್ರತಿ ಮನೆ ಮನೆಗೆ ಭೇಟಿ ನೀಡಿದಾಗಲೂ ಮಾಸ್ಕ್ ನೀಡಿದ್ದೇವೆ. ಆದರೆ ಹೆಚ್ಚಿನ ಜನರು ಮಾತ್ರ ಮಾಸ್ಕ್ ಧರಿಸುತ್ತಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮಾಸ್ಕ್ ಧರಿಸಿ ಎಂದರೆ ಏನೂ ಆಗಲ್ಲ ಬಿಡಣ್ಣ ಅಂತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು 9 ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗಲೂ ನೆಗೆಟಿವ್ ವರದಿ ಬಂದಿದೆ. ಆದರೆ, ಹತ್ತನೇ ಬಾರಿ ಪಾಸಿಟಿವ್ ಬಂದಿತ್ತು. ಕ್ಷೇತ್ರದಲ್ಲಿ ಇದ್ದಾಗ ನನಗೆ ಕೊರೊನಾ ತಗುಲಿಲ್ಲ, ಆದರೆ ಅಧಿವೇಶನದಲ್ಲಿ ಪಾಲ್ಗೊಂಡ ವೇಳೆ ಕೊರೊನಾ ಬಂದಿರಬಹುದೆಂಬ ಭಾವನೆ ಇದೆ. ಹಾಗಾಗಿ, ತಕ್ಷಣ ಚಿಕಿತ್ಸೆಗೆ ಒಳಗಾಗಿ ನಂತರ ಹೋಂ ಕ್ವಾರಂಟೈನ್ಗೆ ತೆರಳಿದ್ದೆ. ಮತ್ತೆ ಪರೀಕ್ಷೆ ಮಾಡಿಸಿ ನನಗೆ ನೆಗೆಟಿವ್ ರಿಪೋರ್ಟ್ ಬಂದ ಮೇಲೆ ಹೊರಗೆ ಬಂದಿದ್ದೇನೆ ಎಂದರು. ಇನ್ನೂ ಪ್ರತಿಯೊಬ್ಬರೂ ಸಹ ನಿರ್ಲಕ್ಷ್ಯ ತೋರದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಿದರು.
ಅಪಪ್ರಚಾರ: ಹಳ್ಳಿಗಳಿಗೆ ವೈದ್ಯರನ್ನು ಕೋವಿಡ್ ಪರೀಕ್ಷೆ ನಡೆಸಲು ಕಳುಹಿಸಿಕೊಟ್ಟ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಕೋವಿಡ್-19 ಬಂದಿಲ್ಲ, ಅಂತಹ ಕಾಯಿಲೆ ಯಾವುದೂ ಇಲ್ಲ. ಪರೀಕ್ಷೆ ಮಾಡಿಸಿ ಪಾಸಿಟಿವ್ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಿ 4-5 ಲಕ್ಷ ರೂ. ಹಣ ವಸೂಲಿ ಮಾಡುತ್ತಾರೆ ಎಂದೆಲ್ಲಾ ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆಲ್ಲ ಕಿವಿಗೊಡಬೇಡಿ, ಪರೀಕ್ಷೆ ಮಾಡಿಸಿ ಎಂದು ರೇಣುಕಾಚಾರ್ಯ ಮನವಿ ಮಾಡಿದರು.
ನಾಮಪತ್ರ ಸಲ್ಲಿಸುವ ವೇಳೆ ಕೋವಿಡ್ ನಿಯಮ ಉಲ್ಲಂಘನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರೇ ಆಗಲಿ ನಿಯಮ ಪಾಲಿಸೋದು ಉತ್ತಮ. ಉಪಚುನಾವಣೆ ಕೇವಲ ಎರಡು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಗ್ರಾಮ ಪಂಚಾಯತ್ ಚುನಾವಣೆ ಅಂದರೆ ಜನ ಜಿದ್ದಿಗೆ ಬಿದ್ದ ರೀತಿಯಲ್ಲಿ ಚುನಾವಣೆ ಮಾಡುತ್ತಾರೆ. ಅದಕ್ಕೆ ಎಲ್ಲರ ತೀರ್ಮಾನ ಕೂಡ ಮುಖ್ಯ. ನಾವು ಮತ್ತೊಬ್ಬರಿಗೆ ಮಾದರಿಯಾಗಿರಬೇಕು. ಆ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸ್ವ ಪಕ್ಷದ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಹೇಳಿದರು.
ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಲಕ್ಷಾಂತರ ರೂ. ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆಂದು ಉತ್ತರಿಸಿದರು.