ಬೆಂಗಳೂರು : ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಚೆಕ್‌ಪೋಸ್ಟ್ ಹಾಗೂ ಗಡಿ ಪ್ರವೇಶಗಳನ್ನು ಮುಚ್ಚುವ ಸಂಬಂಧ ಜಿಲ್ಲಾಡಳಿತಗಳಿಗೆ ನೀಡಿದ್ದ ಅಧಿಕಾರವನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಮೌಖಿಕವಾಗಿ ಹೈಕೋರ್ಟ್ಗೆ ತಿಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೇರಳ ಗಡಿ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಕಾಸರಗೋಡಿನ ವಕೀಲ ಬಿ. ಸುಬ್ಬಯ್ಯ ರೈ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ : ₹35 ಲಕ್ಷ ಮೌಲ್ಯದ ಮದ್ಯ ಕಾಣೆ: ಇಲಿಗಳ ಮೇಲೆ ಆರೋಪ ಹೊರಿಸಿದ ಪೊಲೀಸರು!
ಈ ವೇಳೆ ಅರ್ಜಿದಾರರ ಪರ ವಕೀಲ ಕೆ. ರವಿಶಂಕರ್ ವಾದಿಸಿ, ಅಂತರಾಜ್ಯ ಗಡಿಗಳಲ್ಲಿ ಪ್ರಯಾಣಿಕರ ಮತ್ತು ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಆದರೂ, ರಾಜ್ಯ ಸರ್ಕಾರ ಸಂಚಾರ ನಿರ್ಬಂಧಿಸುತ್ತಿದೆ. ಅಷ್ಟಕ್ಕೂ ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಸಂಚಾರ ನಿರ್ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಇದಕ್ಕೆ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಗಡಿ ಭಾಗಗಳಲ್ಲಿ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಸಂಚಾರ ನಿರ್ಬಂಧಿಸಲು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಲಾಗಿದ್ದ ಅಧಿಕಾರವನ್ನು ವಾಪಸ್ ಪಡೆದುಕೊಳ್ಳುವುದಾಗಿ ಮೌಖಿಕವಾಗಿ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಈ ಕುರಿತು ಲಿಖಿತ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿತು.