ಬೆಂಗಳೂರು: ವಿದ್ಯುತ್ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಆದೇಶ ಮಾಡಿದೆ.
ನ.1 ರಿಂದ ಜಾರಿಯಾಗುವಂತೆ ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಇದು ಬೆಸ್ಕಾಂ ವ್ಯಾಪ್ತಿಗೆ ಮಾತ್ರ ಅನ್ವಯಿಸಲಿದೆ. ಈ ಸಂಬಂಧ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಸರ್ಕಾರದಿಂದ ಅನುಮೋದನೆಗೊಂಡ ಆದೇಶವನ್ನು ಪ್ರಕಟಿಸಿದೆ. ವಿದ್ಯುತ್ ವೆಚ್ಚದ ಹೊರೆ ಹೆಚ್ಚಾಗಿದ್ದು, ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ದರ ಹೆಚ್ಚಳ ಮಾಡುವಂತೆ ಆಯೋಗ ಮನವಿ ಮಾಡಿತ್ತು. ಪ್ರತಿ ಯೂನಿಟ್ ಗೆ 1.96 ರೂ. ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರದಿಂದ ಇದಕ್ಕೆ ಸಮ್ಮತಿ ಸಿಕ್ಕಿಲ್ಲ. 40 ಪೈಸೆ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ತಿಳಿಸಿದ್ದಾರೆ.
ಕೊರೊನಾ ಆತಂಕದ ಮಧ್ಯೆ ಬೆಸ್ಕಾಂ ವಿದ್ಯುತ್ ದರ ಹೆಚ್ಚಳ ಕೂಡ ಮಾಡುವ ಮೂಲಕ ಗ್ರಾಹಕರಿಗೆ ಇನ್ನೊಂದು ಹೊರೆಸಿದೆ. ಮಾರ್ಚ್ ನಲ್ಲಿ ಏರಿಕೆ ಆಗಬೇಕಿದ್ದ ದರ ಈಗ ಆಗಿದೆ ಎಂದು ಬೆಸ್ಕಾಂ ತಿಳಿಸಿದೆ. ಹಿಂದೆ ಆಗಬೇಕಿದ್ದ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿತ್ತು. ಇದೀಗ ದರ ಪರಿಷ್ಕರಣೆ ಗೊಳಿಸಿ ಆದೇಶ ಹೊರಡಿಸಲು ಸರ್ಕಾರ ಸಮ್ಮತಿ ಸೂಚಿಸಿದ್ದು, ಕೆಇಆರ್ಸಿ ಮೂಲಕ ಆದೇಶ ಹೊರಬಿದ್ದಿದೆ.
ಇದು ವಾರ್ಷಿಕವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಪ್ರತಿವರ್ಷ ಮಾರ್ಚ್ ನಲ್ಲಿ ಬೆಲೆ ಹೆಚ್ಚಳ ಆಗುತ್ತಿತ್ತು. ಆದರೆ ಈ ಸಾರಿ ಇದು ನವಂಬರ್ ನಲ್ಲಿ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈಗಿರುವ ದರವೇ ಹೆಚ್ಚಳವಾಗಿದ್ದು, ಅದನ್ನೇ ಕಡಿಮೆಗೊಳಿಸುವಂತೆ ಮನವಿ ಮಾಡುತ್ತಿದ್ದ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುವ ಸಾಧ್ಯತೆ ಇದೆ.
ಕೊರೊನಾ ಆತಂಕದಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಹಲವರು ತುತ್ತಾಗಿದ್ದಾರೆ. ಈ ಮಧ್ಯೆ ಸರ್ಕಾರ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು ನಿಜಕ್ಕೂ ಬಡವರ್ಗದವರು ಇನ್ನಷ್ಟು ಆತಂಕಕ್ಕೆ ತಳ್ಳಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.