ಬೆಂಗಳೂರು : ಕೊರೊನಾ ಲಾಕ್‌ಡೌನ್ ನಿಂದಾಗಿ ಅತ್ಯಂತ ಸಂಕಷ್ಟಕ್ಕೊಳಗಾಗಿರುವುದು ವಲಸೆ ಕಾರ್ಮಿಕರು. ಸಂಕಷ್ಟದಲ್ಲಿರುವ ಕಾರ್ಮಿಕರನ್ನು ಈವರೆಗೆ ಸರ್ಕಾರ ಗುರುತಿಸಿದ್ದು, ಅದರ ವರದಿ ಇಲ್ಲಿದೆ.
ಕೊರೊನಾ ಹಿನ್ನೆಲೆ ಲಾಕ್‌ಡೌನ್ ಜಾರಿಗೆ ಬರ್ತಾ ಇದ್ದ ಹಾಗೇ ದೇಶದಾದ್ಯಂತ ವಲಸೆ ಕಾರ್ಮಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಆದರೆ, ಹಸಿವಿನ ಭಯದಲ್ಲಿ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ಗುಳೇ ಹೋಗಲು ಪ್ರಾರಂಭಿಸಿದ್ದರು. ಪರಿಸ್ಥಿತಿ ಮನಗಂಡ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಾರ್ಮಿಕರ ಸಾಮೂಹಿಕ ವಲಸೆ ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತ್ತು.
ಅದರಂತೆ ರಾಜ್ಯ ಸರ್ಕಾರ ಕಾರ್ಮಿಕರು ಗುಳೇ ಹೋಗುವುದನ್ನು ನಿಯಂತ್ರಿಸುವ ಸಲುವಾಗಿ ಅವರಿಗಾಗಿ ವಸತಿ, ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ. ಸಂಕಷ್ಟಕ್ಕೀಡಾಗಿರುವ ಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ಮಾಡುತ್ತಿರುವ ಸರ್ಕಾರ, ಅವರಿಗಾಗಿ ನಿರಾಶ್ರಿತರ ಕೇಂದ್ರಗಳನ್ನು ನಿರ್ಮಿಸಿ ಊಟೋಪಚಾರದ ವ್ಯವಸ್ಥೆ ಕಲ್ಪಿಸುತ್ತಿದೆ.
ಈವರೆಗೆ ಗುರುತಿಸಲ್ಪಟ್ಟ ಕಾರ್ಮಿಕರು:
ಸರ್ಕಾರದ ಅಂಕಿಅಂಶದ ಪ್ರಕಾರ ಈವರೆಗೆ ರಾಜ್ಯಾದ್ಯಂತ ಒಟ್ಟು 2,17,476 ಸಂಕಷ್ಟದಲ್ಲಿರುವ ಕಾರ್ಮಿಕರನ್ನು ಗುರುತಿಸಲಾಗಿದೆ. ಸುಮಾರು 46431 ಕಾರ್ಮಿಕರಿಗೆ ಅವರು ಕೆಲಸ ಮಾಡುವ ಕಾರ್ಖಾನೆಗಳ ಮಾಲೀಕರುಗಳೇ ಆಶ್ರಯ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದಾರೆ.
ರಾಜ್ಯಾದ್ಯಂತ ಸರ್ಕಾರ ಒಟ್ಟು 208 ಸಕ್ರಿಯ ನಿರಾಶ್ರಿತರ ಕೇಂದ್ರಗಳನ್ನು ಕಾರ್ಮಿಕರಿಗಾಗಿ ನಿರ್ಮಿಸಿದೆ. ಇದರಲ್ಲಿ 16,138 ಕಾರ್ಮಿಕರು ಆಶ್ರಯ ಪಡೆದಿದ್ದಾರೆ. ಇನ್ನು ಸುಮಾರು 254 ಕಾರ್ಮಿಕರು ಎನ್ಜಿಒಗಳ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಆಹಾರ ಕ್ಯಾಂಪ್ ಗಳಲ್ಲಿ ಊಟೋಪಚಾರ:
ರಾಜ್ಯಾದ್ಯಂತ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಊಟೋಪಚಾರ ಕಲ್ಪಿಸಲು ಸರ್ಕಾರ 691 ಆಹಾರ ಕೇಂದ್ರಗಳನ್ನು ನಿರ್ಮಿಸಿದೆ. ಎನ್ ಜಿಒ ಮೂಲಕ 189 ಫುಡ್ ಕ್ಯಾಂಪ್ ನಿರ್ವಹಿಸಲಾಗುತ್ತಿದೆ. ಅದರಂತೆ ಸರ್ಕಾರ 1,12,300 ಕಾರ್ಮಿಕರಿಗೆ ನಿರಾಶ್ರಿತರಿಗೆ ಊಟೋಪಚಾರ ನೀಡುತ್ತಿದ್ದರೆ, ಎನ್ ಜಿಒಗಳ ಫುಡ್ ಕ್ಯಾಂಪ್ ಗಳಲ್ಲಿ 1,05,176 ಕಾರ್ಮಿಕರಿಗೆ ಆಹಾರ ನೀಡಲಾಗುತ್ತಿದೆ.
ವಲಸೆ ಹೋದವರೆಷ್ಟು?:
ಲಾಕ್‌ಡೌನ್ ಹಿನ್ನೆಲೆ ರಾಜ್ಯದಿಂದ ಸುಮಾರು 4,500 ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ವಲಸೆ ಕಾರ್ಮಿಕರ ನೋಡಲ್ ಅಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1.10 ಲಕ್ಷ ಕಾರ್ಮಿಕರನ್ನು ಗುರುತಿಸಲಾಗಿದೆ. ಈ ಪೈಕಿ ಮಹದೇವಪುರದಲ್ಲಿ ಸುಮಾರು 30,000 ವಲಸೆ ಕಾರ್ಮಿಕರಿದ್ದರೆ, ಯಲಹಂಕದಲ್ಲಿ ಸುಮಾರು 18,200 ವಲಸೆ ಕಾರ್ಮಿಕರನ್ನು ಗುರುತಿಸಲಾಗಿದೆ.