ಬೆಂಗಳೂರು: ಕಸದಿಂದ ವಿದ್ಯುತ್ ತಯಾರಿಕಾ ಘಟಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ನಗರದ ಹೊರವಲಯಗಳಿಗೆ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ. ಚಿಕ್ಕನಾಗಮಂಗಲ - ತ್ರೀ ವೇಸ್ಟ್ ಕಂಪನಿ, ಕೆಪಿಸಿಎಲ್- ಬಿಡದಿ ಸಂಸ್ಥೆ, ದೊಡ್ಡಬಿದಿರೆಕಲ್ಲು - ಇಂಡಿಯಂ ಸಂಸ್ಥೆ, ಕನ್ನಹಳ್ಳಿ - ಸತರಾಂ ಸಂಸ್ಥೆ ಸೇರಿ ಒಟ್ಟು ನಗರದ 4 ಕಡೆ ವಿದ್ಯುತ್ ಉತ್ಪಾದನೆಗೆ ತಯಾರಿ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.
ಬೆಳ್ಳಳ್ಳಿ ಕ್ವಾರಿ ಒಂದು ವಾರದಲ್ಲಿ ಕ್ಲೋಸ್.!
ಇನ್ನು ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಲಿದ್ದು, ಅಲ್ಲಿ ಕಸ ಹಾಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಂಗಳೂರಿನ ಮಿಶ್ರ ತ್ಯಾಜ್ಯ ಸುರಿಯಲು 15 ಕೋಟಿ ರೂಪಾಯಿ ವೆಚ್ಚದಲ್ಲಿ ಮಿಟಗಾನಹಳ್ಳಿ ಸಮೀಪ ಕ್ವಾರಿ ಸಿದ್ಧವಾಗಿದೆ. ಮುಂದಿನ 4 ತಿಂಗಳು ನಗರದ ಕಸ ಹಾಕಲು ಇಲ್ಲಿ ಅವಕಾಶವಿದೆ. ಸರ್ಕಾರಕ್ಕೆ ಸದ್ಯ ಬಾಗಲೂರು ಹಾಗೂ ಹುಲ್ಲಹಳ್ಳಿಯಲ್ಲೂ ಕ್ವಾರಿ ಪಿಟ್ ತಯಾರು ಮಾಡುವ ಪ್ರಸ್ತಾವನೆ ನೀಡಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.
ಪಾರ್ಕ್ ಗಳಲ್ಲಿ ಕಸ ನಿರ್ವಹಣೆಗೆ ಚಿಂತನೆ :
ಬೆಂಗಳೂರಿನ 198 ವಾರ್ಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಪಾರ್ಕ್ ಗಳಿವೆ. ಅಲ್ಲಿ ಹಸಿ ಕಸವನ್ನ ಕಾಂಪೋಸ್ಟ್ ಮಾಡಲು ಆಲೋಚಿಸಲಾಗಿದೆ. ಈಗಾಗಲೇ ಹೆಚ್ಎಸ್ಆರ್ ಲೇಔಟ್ ನಲ್ಲಿ ಯಶಸ್ವಿಯಾಗಿ ಈ ಯೋಜನೆ ಜಾರಿಗೆ ತರಲಾಗಿದೆ.
ಕಸ ನಿರ್ವಹಣೆಗೆ ಪ್ರತ್ಯೇಕ ಕಾರ್ಪೋರೇಷನ್:
ಬೆಂಗಳೂರಿನ ಕಸ ನಿರ್ವಹಣೆಗಾಗಿ ಪತ್ಯೇಕ ಕಾರ್ಪೋರೇಷನ್ ಮಾಡಲು ಸರ್ಕಾರ ಸೂಚಿಸಿದೆ. ಈ ಸಂಬಂಧ ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಇದು ಪಾಲಿಕೆಯ ಅಂಗವಾಗಿಯೇ ಉಳಿಯಲಿದೆ. ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ.
ಕಸಕ್ಕೂ ಬಾರ್ ಕೋಡ್ :
ಇನ್ನು ಮುಂದೆ ಕಸದ ಆಟೋ ಟಿಪ್ಪರ್ಗಳು ತಪ್ಪು ಲೆಕ್ಕ ನೀಡುವುದನ್ನ ತಪ್ಪಿಸಲು ಪಾಲಿಕೆ ಹೊಸ ಐಡಿಯಾ ಮಾಡಿದೆ. ಪ್ರತಿ ಮನೆ ಬಾಗಿಲಿಗೂ ಜಿಯೋ ಟ್ಯಾಗ್ ಅಳವಡಿಸಿ, ಕಸ ಸಂಗ್ರಹಿಸಲು ಆಟೋಟಿಪ್ಪರ್ ಹೋಗಿದೆಯಾ ಎಂದು ಟ್ರ್ಯಾಕ್ ಮಾಡಲಾಗುತ್ತದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.