ಬೆಂಗಳೂರು: ಕಾಡುಗೊಲ್ಲರ ನಿಗಮ ಸ್ಥಾಪಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಅದನ್ನು ಮರೆತಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಉಪಚುನಾವಣೆಗೂ ಮುನ್ನ ಮಸ್ಕಿ ಕ್ಷೇತ್ರಕ್ಕೆ 110 ಕೋಟಿ ರೂ. ಅನುದಾನ ನೀಡಿರುವ ಸರ್ಕಾರವು ಶಿರಾ ಉಪಚುನಾವಣೆಯಲ್ಲಿ ಕಾಡುಗೊಲ್ಲರ ನಿಗಮ ಮಾಡುತ್ತೇನೆಂದು ಹೇಳಿ ಈಗ ಕಾಡುಗೊಲ್ಲರ ನಿಗಮ ಎಂದರೇನು? ಎಂಬಂತೆ ಅದನ್ನು ಸಂಪೂರ್ಣವಾಗಿ ಮರೆತಿದೆ. ಚುನಾವಣೆಯ ಹೇಗೆಬೇಕೋ ಹಾಗೆ ಸಮಯಕ್ಕೆ ತಕ್ಕಂತೆ ನಾಟಕವಾಡುವುದೇ ರಾಜ್ಯ ಬಿಜೆಪಿ ನಾಯಕರ ಕೆಲಸ ಎಂದು ಟೀಕಿಸಿದ್ದಾರೆ.
ಶಿರಾ ವಿಧಾನಸಭೆ ಉಪಚುನಾವಣೆ ಘೋಷಣೆಯಾದ ಸಂದರ್ಭ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಡುಗೊಲ್ಲ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ ಆರಂಭದಲ್ಲಿ ಇದ್ದ ನಿರೀಕ್ಷೆ ಈಗ ಈಡೇರಿಕೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಆರೋಪ ಮಾಡಲು ಆರಂಭಿಸಿದ್ದು, ಮಹದೇವಪ್ಪ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ವಿರುದ್ಧ ದೂರಿದ್ದಾರೆ.