ಬೆಂಗಳೂರು: ಸರ್ಕಾರಿ ಇಲಾಖೆಗಳ ಬಿ, ಸಿ ಮತ್ತು ಡಿ ದರ್ಜೆ ನೌಕರರಿಗೆ ಮಾರ್ಚ್ 31ರವರೆಗೆ ನೀಡಿದ್ದ ರಜೆಯನ್ನು ಏಪ್ರಿಲ್ 14ರವರೆಗೆ ವಿಸ್ತರಿಸಲಾಗಿದೆ.
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಅಗತ್ಯ ಸೇವೆಗಳನ್ನು ಪೂರೈಸುವ 11 ಇಲಾಖೆಗಳನ್ನು ಹೊರತುಪಡಿಸಿ ಇತರೆ ಇಲಾಖೆಗಳ ಗ್ರೂಪ್ ಎ, ಬಿ ಮತ್ತು ಸಿ ದರ್ಜೆ ಸಿಬ್ಬಂದಿಗೆ ಮಾ. 31ರ ತನಕ ರಜೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ದೇಶದಾದ್ಯಂತ ಏ. 14ರವರೆಗೆ ಲಾಕ್‌ಡೌನ್ ಇರಲಿದ್ದು, ಈ ಹಿನ್ನೆಲೆ ನೌಕರರ ರಜೆಯನ್ನು ಏ. 14ರವರೆಗೆ ವಿಸ್ತರಿಸಿ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
![GOVTSTAFFLEAVE](https://etvbharatimages.akamaized.net/etvbharat/prod-images/kn-bng-03-govtstaffleave-extension-script-7201951_30032020192930_3003f_1585576770_339.jpg)
ಅದರಂತೆ ಅಗತ್ಯ ಸೇವೆ ಪೂರೈಸುವ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಧನ ಇಲಾಖೆ, ಒಳಾಡಳಿತ ಇಲಾಖೆ, ವೈದ್ಯಕೀಯ ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಪೂರೈಕೆ, ಸಾರಿಗೆ, ಪಶುವೈದ್ಯಕೀಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಿಬ್ಬಂದಿಗೆ ರಜೆ ಇರುವುದಿಲ್ಲ.
ಒಂದು ವೇಳೆ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಸಂಬಂಧ ಅಗತ್ಯ ಬಿದ್ದಲ್ಲಿ ರಜೆ ಘೋಷಿಸಲ್ಪಟ್ಟ ಇಲಾಖೆಗಳ ಸಿಬ್ಬಂದಿಯ ಸೇವೆಯನ್ನು ಜಿಲ್ಲಾಧಿಕಾರಿಗಳು ಡೆಯಬಹುದಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.