ಬೆಂಗಳೂರು: ಮುಂದಿನ ಹಣಕಾಸು ವರ್ಷದಿಂದ ಪಡಿತರ ಫಲಾನುಭವಿಗಳಿಗೆ ವಿಟಮಿನ್ ಮತ್ತು ಪೌಷ್ಟಿಕಾಂಶಗಳನ್ನು ಒಳಗೊಂಡ ಸಾರವರ್ಧಿತ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತಯಾರಿಯನ್ನು ನಡೆಸಿತ್ತಿದೆ. ಪ್ರಾಯೋಗಿಕವಾಗಿ ನಾಲ್ಕೈದು ಜಿಲ್ಲೆಗಳಲ್ಲಿ ಈ ಸಾರವರ್ಧಿತ ಅಕ್ಕಿ (ಫೋರ್ಟಿಫೈಯ್ಡ್ ಅಕ್ಕಿ) ವಿತರಿಸಲು ಯೋಚಿಸಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಈ ಯೋಜನೆಯನ್ನು ಫೆಬ್ರವರು 2019ರಲ್ಲಿ ಅನುಮೋದಿಸಲಾಗಿತ್ತು. ಇದಕ್ಕಾಗಿ 2019-20 ಬಳಿಕ ಮೂರು ವರ್ಷಗಳಿಗೆ ಒಟ್ಟು 174.6 ಕೋಟಿ ರೂ. ಮೀಸಲಿಡಲಾಗಿತ್ತು. ಕೇವಲ ಐದು ರಾಜ್ಯಗಳಾದ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಛತ್ತೀಸಗಢದಲ್ಲಿ ಪ್ರಾಯೋಗಿಕವಾಗಿ ಆಯ್ದ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ವಿತರಿಸಲಾಗುತ್ತಿದೆ.
ಸಾರವರ್ಧನೆಗೊಳಿಸಿದ ಅಕ್ಕಿಯನ್ನು ಪಡಿತರ ಫಲಾನುಭವಿಗಳಿಗೆ ನೀಡುವ ಮೂಲಕ ಅಪೌಷ್ಠಿಕತೆ ಸಮಸ್ಯೆ ನಿವಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದೀಗ ಕರ್ನಾಟಕದಲ್ಲೂ ಸಾರವರ್ಧಿತ ಅಕ್ಕಿ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಏನಿದು ಸಾರವರ್ಧಿತ ಅಕ್ಕಿ:
ವಿಟಮಿನ್ ಮತ್ತು ಕಬ್ಬಿಣಾಂಶ ಮೊದಲಾದ ಪೌಷ್ಟಿಕಾಂಶಗಳನ್ನು ಅಕ್ಕಿಯ ಹಿಟ್ಟಿನ ಜತೆಯಲ್ಲಿ ಬೆರೆಸಿ ಅಕ್ಕಿಯ ರೂಪ ಮತ್ತು ಗಾತ್ರದ ಕಾಳಿನ ರೀತಿಯಲ್ಲಿ ತಯಾರಿಸಲಾಗಿರುತ್ತದೆ.
ಇದನ್ನು ಸಾರವರ್ಧಕ ಅಕ್ಕಿಯ ತಿರುಳು ಎಂದು ಕರೆಯಲಾಗುತ್ತದೆ. ಈ ಅಕ್ಕಿಯ ತಿರುಳು ಸ್ವಾಭಾವಿಕ ಅಕ್ಕಿಯನ್ನು ಹೋಲುತ್ತದೆ. ಒಂದು ಭಾಗ ಸಾರವರ್ಧಕ ಅಕ್ಕಿಯ ತಿರುಳನ್ನು ನೂರು ಭಾಗ ಸಾಮಾನ್ಯ ಅಕ್ಕಿಯೊಂದಿಗೆ (1:100 ಅನುಪಾತ) ಬೆರೆಸಲಾಗುತ್ತದೆ.
ಓದಿ...ಕೋವಿಡ್ ಮೊದಲ ಚುಚ್ಚುಮದ್ದು ಪಡೆದ ಸೌದಿ ಅರೇಬಿಯಾ ದೊರೆ ಸಲ್ಮಾನ್!
ಹೋಳಾದ ಅಕ್ಕಿಯಿಂದ ಸಾರವರ್ಧಿತ ಅಕ್ಕಿಯನ್ನು ಮಾಡಲಾಗುತ್ತಿದೆ. ಹೋಳಾದ ಅಕ್ಕಿಯನ್ನು ಪುಡಿ ಮಾಡಿ ಅದಕ್ಕೆ ಪೋಷಕಾಂಶಗಳನ್ನು ಸೇರಿಸಲಾಗುತ್ತದೆ. ಅದನ್ನು ಯಂತ್ರದಲ್ಲಿ ಸಂಸ್ಕರಿಸಿ ಅಕ್ಕಿ ಆಕಾರದಲ್ಲಿ ಕಾಳುಗಳನ್ನಾಗಿ ಮಾಡಲಾಗುತ್ತದೆ.
ಸಾರವರ್ಧಿತ ಅಕ್ಕಿ ವಿತರಣೆ ಲೆಕ್ಕಾಚಾರ ಏನು?:
ಮುಂದಿನ ಆರ್ಥಿಕ ವರ್ಷದಿಂದ ಸಾರವರ್ಧಿತ ಅಕ್ಕಿಯನ್ನು ಪ್ರಾಯೋಗಿಕವಾಗಿ ವಿತರಿಸಲು ಮುಂದಾಗಿದ್ದೇವೆ ಎಂದು ಆಹಾರ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ನಾಲ್ಕೈದು ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಸಾರವರ್ಧಿತ ಅಕ್ಕಿ ವಿತರಿಸಲು ಯೋಜಿಸಲಾಗಿದೆ. ಅದರ ಯಶಸ್ಸನ್ನು ಕಂಡು ಬಳಿಕ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಲಿದೆ. ಬಿಪಿ, ಮದುಮೇಹ ಸಮಸ್ಯೆಯನ್ನು ಈ ಅಕ್ಕಿ ನಿಯಂತ್ರಿಸಲಿದೆ. ಜೊತೆಗೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವ ಪ್ರಕರಣಗಳೂ ನಿಯಂತ್ರಣಕ್ಕೆ ಬರಲಿದೆ ಎಂದು ವಿವರಿಸಿದ್ದಾರೆ.
ಪ್ರತಿ ಕೆಜಿ ಸಾರವರ್ಧಿತ ಅಕ್ಕಿಯ ಅಂದಾಜು ವೆಚ್ಚ 0.60 ರೂ. ಎನ್ನಲಾಗಿದೆ. 75:25 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯೆ ಈ ವೆಚ್ಚವನ್ನು ಪಾಲು ಮಾಡಲಾಗುತ್ತದೆ.