ಬೆಂಗಳೂರು: ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಆಟವಾಡುತ್ತಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ಐಪಿಎಸ್ ಅಧಿಕಾರಿ ಇಶಾಪಂತ್ ವರ್ಗಾವಣೆ ವಿಚಾರದಲ್ಲಿ ಕೆಲವೇ ಗಂಟೆಗಳಲ್ಲಿ ಮತ್ತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ನಗರ ಆಗ್ನೇಯ ವಿಭಾಗದ ಡಿಸಿಪಿಯಾಗಿದ್ದ ಇಶಾಪಂತ್ ಅವರನ್ನು ಮೂರು ದಿನಗಳ ಹಿಂದೆ ಸಿಐಡಿ ಎಸ್ಪಿಯಾಗಿ ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ಸರ್ಕಾರ ಐಪಿಎಸ್ ಅಧಿಕಾರಿ ಜೋಷಿ ಶ್ರೀನಿವಾಸ್ ಮಹದೇವನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇಂದು ಆದೇಶದಲ್ಲಿ ಇಶಾಪಂತ್ ಅವರನ್ನು ಡಿಸಿಪಿಯಾಗಿ ಮುಂದುವರೆಸಿ ಆದೇಶ ಹೊರಡಿಸಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಆದೇಶದಲ್ಲಿ ಮಾರ್ಪಾಡುಗೊಳಿಸಿ ಇಶಾಪಂತ್ ಅವರನ್ನು ಕಮಾಂಡ್ ಸೆಂಟರ್ನ ಡಿಸಿಪಿಯಾಗಿ ವರ್ಗಾವಣೆ ಮಾಡಿದ್ದು, ಜೋಷಿ ಶ್ರೀನಿವಾಸ್ ಮಹದೇವನ್ ಅವರನ್ನು ಡಿಸಿಪಿಯಾಗಿ ನಿಯುಕ್ತಿಗೊಳಿಸಲಾಗಿದೆ. ಅಲ್ಲದೆ ಜಿನೇಂದ್ರ ಕಣಗಾವಿ ಅವರನ್ನು ಬೆಂಗಳೂರು ನಗರ ಆಂತರಿಕ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.