ಬೆಂಗಳೂರು : ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಸಿಹಿಸುದ್ದಿ. ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹೊಸದಾಗಿ ನಾಲ್ಕು ಸಂಚಾರಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಹೊಸದಾಗಿ ತಲಘಟ್ಟಪುರ, ಬೆಳ್ಳಂದೂರು, ಹೆಣ್ಣೂರು ಹಾಗೂ ಮಹಾದೇವಪುರ ಸಂಚಾರಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಹಸಿರು ನಿಶಾನೆ ದೊರೆತಿದೆ.
ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣಾ ವ್ಯಾಪ್ತಿಯನ್ನ ವಿಭಜಿಸಿ ತಲಘಟ್ಟಪುರ ಸಂಚಾರ ಠಾಣೆ, ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿ ವಿಭಜಿಸಿ ಬೆಳ್ಳಂದೂರು, ಚಿಕ್ಕಜಾಲ ಹಾಗೂ ಬಾಣಸವಾಡಿ ವ್ಯಾಪ್ತಿಯ ಕೆಲ ಪ್ರದೇಶಗಳನ್ನೊಳಗೊಂಡಂತೆ ಹೆಣ್ಣೂರು ಸಂಚಾರ ಠಾಣೆ ಹಾಗೂ ಕೆ.ಆರ್.ಪುರಂ ಠಾಣಾ ವ್ಯಾಪ್ತಿ ವಿಭಜಿಸಿ ಮಹಾದೇವಪುರ ಸಂಚಾರ ಠಾಣೆ ಸ್ಥಾಪನೆಗೆ ಸಮ್ಮತಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಶೀಘ್ರದಲ್ಲೇ ನೂತನ ಠಾಣೆಗಳು ಕಾರ್ಯಾರಂಭ ಮಾಡಲಿವೆ.
ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯ ನಿಯಂತ್ರಣದ ದೃಷ್ಟಿಯಿಂದ ನೂತನ ಸಂಚಾರ ಠಾಣೆಗಳ ಅಗತ್ಯತೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಪೊಲೀಸ್ ಇಲಾಖೆ ಮನವಿ ಸಲ್ಲಿಸಿತ್ತು. ಹೀಗಾಗಿ ಸರ್ಕಾರ ಹೊಸ ಸಂಚಾರ ಠಾಣೆಗಳನ್ನು ತೆರೆಯಲು ಈ ಗ್ರೀನ್ ಸಿಗ್ನಲ್ ನೀಡಿತ್ತು. ಈಗ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಬೆಳ್ಳಂದೂರು ಮತ್ತು ಮಹದೇವಪುರದಲ್ಲಿ ಅನೇಕ ಐಟಿ ಕಂಪನಿಗಳಿವೆ ಮತ್ತು ಇಲ್ಲಿ ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳ ಸ್ಥಾಪಿಸುವುದರಿಂದ ಟೆಕ್ - ಕಾರಿಡಾರ್‌ನಲ್ಲಿ ಉತ್ತಮ ಟ್ರಾಫಿಕ್ ನಿರ್ವಹಣೆ ಮಾಡುವ ಗುರಿ ಹೊಂದಲಾಗಿದೆ. ತಲಘಟ್ಟಪುರ ಮತ್ತು ಬೆಳ್ಳಂದೂರು ಠಾಣೆಗಳಿಗೆ ತಲಾ 43 ಸಿಬ್ಬಂದಿ ಹಾಗೂ ಹೆಣ್ಣೂರು ಮತ್ತು ಮಹದೇವಪುರ ಠಾಣೆಗಳಿಗೆ ಕ್ರಮವಾಗಿ 42 ಮತ್ತು 37 ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ.
ಎಸಿಬಿಗೆ ನೀಡಿದ್ದ 221 ಹುದ್ದೆ ಮರು ಹಂಚಿಕೆ: ರದ್ದುಗೊಂಡಿರುವ ಭ್ರಷ್ಟಾಚಾರ ನಿಗ್ರಹ ದಳದಿಂದ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿರುವ 221 ಹುದ್ದೆಗಳನ್ನು ಮರು ಹಂಚಿಕೆ ಮಾಡಲು ಸರ್ಕಾರ ಈ ಹಿಂದೆ ಸಹಮತಿ ನೀಡಿ ಆದೇಶಿಸಿದೆ. ಎಸಿಬಿಯಿಂದ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿರುವ 221 ಹುದ್ದೆಗಳನ್ನು ವಿವಿಧ ಘಟಕಗಳಿಗೆ ಮರು ಹಂಚಿಕೆ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಪರಿಶೀಲಿಸಿ ಸರ್ಕಾರ ಸಹಮತಿ ನೀಡಿತ್ತು. ಪೊಲೀಸ್ ಉಪಾಧೀಕ್ಷಕರ (ಸಿವಿಲ್)-17 ಹುದ್ದೆಗಳಲ್ಲಿ 8 ಹುದ್ದೆಗಳನ್ನು ವಿವಿಧ ಘಟಕಗಳಿಗೆ ಹಾಗೂ ಹೊಸದಾಗಿ ತೆರೆಯಲಾಗುವ 9 ಪೊಲೀಸ್ ಉಪ ವಿಭಾಗಗಳಿಗೆ ಮರು ಹಂಚಿಕೆ ಮಾಡಬೇಕು.
ಬೆಂಗಳೂರು ನಗರದ ಸುಗಮ ಸಂಚಾರ ನಿರ್ವಹಣೆಗಾಗಿ ಬೆಂಗಳೂರು ನಗರದಲ್ಲಿ ಹೊಸದಾಗಿ ತೆರೆಯಲಾಗುವ 4 ಸಂಚಾರ ಪೊಲೀಸ್ ಠಾಣೆಗಳಿಗೆ 4 ಇನ್‌ಸ್ಪೆಕ್ಟರ್, 25 ಹೆಡ್ ಕಾನ್‌ಸ್ಟೇಬಲ್, 75 ಕಾನ್‌ಸ್ಟೇಬಲ್, 21 ಎಎಚ್‌ಸಿ, 40 ಎಪಿಸಿ ಸೇರಿ 165 ಹುದ್ದೆಗಳನ್ನು ಮರು ಹಂಚಿಕೆ ಮಾಡಲು ಸೂಚಿಸಲಾಗಿದೆ. ಎಸಿಬಿಯಿಂದ ಪೊಲೀಸ್ ಇಲಾಖೆಗೆ ಹಿಂತಿರುಗಿಸಲಾಗಿರುವ 37 ಪಿಐ ಹುದ್ದೆಗಳಲ್ಲಿ, 4 ಪಿಐ ಹುದ್ದೆಗಳನ್ನು ಹೊಸ 4 ಸಂಚಾರ ಪೊಲೀಸ್ ಠಾಣೆಗಳಿಗೆ ಬಳಸಿಕೊಂಡ ನಂತರ ಉಳಿಯುವ 33 ಪಿಐ ಹುದ್ದೆಗಳನ್ನು ಹಾಗೂ ಹಾಲಿ ಪೊಲೀಸ್ ವೃತ್ತಗಳಲ್ಲಿರುವ 7 ಸಿಪಿಐ ಹುದ್ದೆಗಳನ್ನು ಬಳಸಿಕೊಂಡು ಒಟ್ಟು 40 ಪೊಲೀಸ್ ಠಾಣೆಗಳನ್ನು ಪಿಐ ಠಾಣೆಗಳನ್ನಾಗಿ ಪರಿವರ್ತಿಸಲು ಸರ್ಕಾರ ಸಹಮತಿಸಿದೆ.
ಎಸಿಬಿಯಿಂದ ಪೊಲೀಸ್ ಇಲಾಖೆಗೆ ಹಿಂತಿರುಗಿಸಲಾಗಿರುವ 1 ಪಿಐ (ಸಶಸ್ತ್ರ) ಹುದ್ದೆಯನ್ನು ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ ಘಟಕಕ್ಕೆ ಹಂಚಿಕೆ ಮಾಡಿಕೊಳ್ಳಬೇಕು. ಹೊಸ ಉಪವಿಭಾಗ/ಸಂಚಾರಿ ಠಾಣೆ ಹಾಗೂ ಮೇಲ್ದರ್ಜೆಗೇರಿಸಿರುವ ಠಾಣೆಗಳಿಗೆ ಎಸಿಬಿಯಿಂದ ಹಿಂದಿರುಗಿಸಿರುವ ಸಿಬ್ಬಂದಿಗಳನ್ನೇ ಮರು ಹಂಚಿಕೆ ಮಾಡಿಕೊಳ್ಳುವ ಷರತ್ತಿಗೊಳಪಟ್ಟು ಈ ಆದೇಶಿಸಿತ್ತು.
ಓದಿ: ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಎರಡು ಹೆಜ್ಜೆ ಮುಂದೆ ಹೋಗಿದ್ದೇವೆ: ಸಿಎಂ ಬೊಮ್ಮಾಯಿ