ಬೆಂಗಳೂರು: ಕಾರ್ತಿಕ ಮಾಸದ ಶುದ್ಧ ಪ್ರತಿಪದ ದಿನವಾದ ಬುಧವಾರ ಹರೇಕೃಷ್ಣ ಗಿರಿಯಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು. ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದು ಮಥುರಾ ನಿವಾಸಿಗಳನ್ನು ಭಯಂಕರ ಮಳೆಯಿಂದ ರಕ್ಷಿಸಿದ ಸ್ಮರಣಾರ್ಥವಾಗಿ ಈ ಗೋವರ್ಧನ ಪೂಜೆ ನಡೆಯಿತು.
ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಶ್ರೀಕೃಷ್ಣ ಮತ್ತು ಬಲರಾಮ ದೇವರಿಗೆ ಗಿರಿಧಾರಿ ಅಲಂಕಾರ ಮತ್ತು ರಾಧಾಕೃಷ್ಣ ಉತ್ಸವ ಮೂರ್ತಿಗೆ ಶ್ರೀರಾಧಾಗಿರಿಧಾರಿಯಾಗಿ ಅಲಂಕರಿಸಲಾಗಿತ್ತು. ಇಡೀ ದೇವಸ್ಥಾನವು ತಳಿರು ತೋರಣ ಮತ್ತು ಹೂವಿನ ಮಾಲೆ, ದೀಪಾಲಂಕಾರ ಮಾಡಿ ಸಿಂಗರಿಸಲಾಗಿತ್ತು. ಗೋವರ್ಧನ ಗಿರಿ ಪೂಜೆ ಜೊತೆಗೆ ಗೋವುಗಳಿಗೆ ವಿಶೇಷ ಪೂಜೆ, ನೈವೇದ್ಯ ಮತ್ತು ಗೊಗ್ರಾಸ ಸಮರ್ಪಿಸಲಾಯಿತು.
![Figure of Govardhana hill made from cake](https://etvbharatimages.akamaized.net/etvbharat/prod-images/16754405_mmm.jpg)
ಭಕ್ತರು ಮಧ್ಯಾಹ್ನದವರೆಗೆ ಶ್ರೀಕೃಷ್ಣನ ಲೀಲೆಗಳನ್ನು ಹೇಳುವ ಸಂಗೀತೋತ್ಸವ ನಡೆಸಿಕೊಟ್ಟರು. ಇಸ್ಕಾನ್ ಬಯಲು ರಂಗ ಸಭಾಂಗಣದಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀ ಮಧು ಪಂಡಿತದಾಸ ಗೋವರ್ಧನ ಪೂಜೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗೋವರ್ಧನ ಗಿರಿ ಮಾದರಿಯ ವಿಶೇಷ ಕೇಕ್: ಉತ್ತರ ಪ್ರದೇಶದ ಮಥುರ ಜಿಲ್ಲೆಯ ಗೋವರ್ಧನ ಬೆಟ್ಟದ ಆಕೃತಿಯನ್ನು ಹೋಲುವ ಒಂದು ಸಾವಿರ ಕೆಜಿ ಸಸ್ಯಹಾರಿ ಕೇಕ್ನಿಂದ ಗಿರಿ ತಯಾರಿಸಲಾಯಿತು. ಜಾಮೂನು, ರಸಗುಲ್ಲ, ಬರ್ಫಿ, ಲಡ್ಡು, ಪೇಡಾ, ಚಕ್ಕುಲಿ, ನಿಪ್ಪಟ್ಟು ಸೇರಿ ವಿವಿಧ ಬಗೆಯ 56 (ಛಪ್ಪನ್ ಭೋಗ) ತಿಂಡಿಗಳನ್ನು ಕೃಷ್ಣನಿಗೆ ಸಮರ್ಪಿಸಲಾಯಿತು.
![Figure of Govardhana hill made from cake](https://etvbharatimages.akamaized.net/etvbharat/prod-images/16754405_mm.jpg)
ನಂತರ ದೇವಸ್ಥಾನಕ್ಕೆ ಬಂದ ಭಕ್ತಾಧಿಗಳು ರಾಧಾಕೃಷ್ಣಚಂದ್ರರಿಗೆ ತುಪ್ಪದ ದೀಪದಿಂದ ಆರತಿ ಮಾಡಿದರು. ನಂತರ ಮಹಾಮಂಗಳಾರತಿ, ಶಯನ ಪಲ್ಲಕ್ಕಿ ಮತ್ತು ಶಯನ ಉತ್ಸವಗಳಿಂದ ಪೂರ್ಣಗೊಂಡಿತು. ಕೃಷ್ಣನ ಎಲ್ಲ ಬಗೆಬಗೆಯ ನೈವೇದ್ಯವನ್ನು ಭಕ್ತರಿಗೆ ಹಂಚಲಾಯಿತು.
ಇದನ್ನೂ ಓದಿ: ಇಸ್ಕಾನ್ ದೇಗುಲದಲ್ಲಿ ದೀಪಾವಳಿ ಸಂಭ್ರಮ: 54 ತಿಂಡಿಗಳಿಂದ ನಿರ್ಮಾಣವಾಯ್ತು ಗೋವರ್ಧನಗಿರಿ