ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ. ಅವರು ಯಾವ ಮಾನಸಿಕ ಸ್ಥಿತಿಯಲ್ಲಿ, ಯಾರಿಂದ ಪ್ರೇರಣೆಗೆ ಒಳಗಾಗಿ, ಯಾವ ಕಾಣದ ಕೈಗಳ ಒತ್ತಡಕ್ಕೆ ಒಳಗಾಗಿ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ಇದು ಕಾಂಗ್ರೆಸ್ ಸೃಷ್ಟಿತ ಸುಳ್ಳು ವದಂತಿ ಎಂದು ಬಿಜೆಪಿ ರಾಜ್ಯ ವಕ್ತಾರ ಪಿ.ರಾಜೀವ್ ತಿಳಿಸಿದ್ದಾರೆ.
ಆರೆಸ್ಸೆಸ್‌ನಲ್ಲಿ ಜಾತೀಯತೆ ಇಲ್ಲ: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿದ್ದು ತಪ್ಪು ಮಾಹಿತಿ. ನಾನು ಒಬ್ಬ ದಲಿತನಾಗಿದ್ದು, ರಾಜಕಾರಣಕ್ಕೆ ಬಂದ ಮೇಲೆ ಆರೆಸ್ಸೆಸ್ ಸಂಪರ್ಕದಲ್ಲಿದ್ದು, ಹತ್ತಿರದಿಂದ ನೋಡಿದ್ದೇನೆ. ಆರೆಸ್ಸೆಸ್ ಎಲ್ಲರನ್ನೂ ಜೋಡಿಸುತ್ತದೆ. ಸಂಪೂರ್ಣ ಹಿಂದೂ ಸಮಾಜವನ್ನು ಒಗ್ಗೂಡಿಸುತ್ತದೆ. ಆರೆಸ್ಸೆಸ್, ಭಾರತ ಮಾತೆಯ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತದೆ. ಅಲ್ಲಿ ಜಾತೀಯತೆ, ಒಡೆಯುವಂಥದ್ದು, ಜಾತಿ ಕೇಳುವ ಆಚರಣೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ದೇಶ ಕಟ್ಟಲು ಶ್ರಮಿಸುವ ಸಂಘಟನೆ ಇದು. ಸ್ವಯಂಸೇವಕರು ಯಾವ ಸನ್ಯಾಸಿಗೂ ಕಡಿಮೆ ಇಲ್ಲದಂತೆ ತ್ಯಾಗದ ಜೀವನ ರೂಪಿಸಿಕೊಳ್ಳುತ್ತಾರೆ. ದೇಶ ಸೇವೆಗೆ ಕಂಕಣಬದ್ಧರಾಗಿ ನಿಂತಿರುತ್ತಾರೆ. ಸ್ವಾರ್ಥರಹಿತ ಸೇವೆ ಮಾಡುವ ಈ ಸಂಘಟನೆಯ ಕುರಿತು ಅರಿವಿಲ್ಲದೆ, ತಿಳಿದುಕೊಳ್ಳದೆ, ಅನುಭವಕ್ಕೆ ಬರಲಾಗದೆ ಇಂಥ ಮಾತು ಹೇಳುವುದು ತಪ್ಪು. ಪ್ರಿಯಾಂಕ್ ಖರ್ಗೆ ಅವರಿಗೆ ಆರೆಸ್ಸೆಸ್ ಸಂಪರ್ಕ ಇಲ್ಲ. ಆರೆಸ್ಸೆಸ್ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವುದಿಲ್ಲ. ಗಂಧ-ಗಾಳಿ ಗೊತ್ತಿಲ್ಲದೆ ಆಳ-ಅರಿವು ಇಲ್ಲದೆ ಲೇಖನ ಬರೆದುಕೊಡುವುದು, ಗಂಧ-ಗಾಳಿ ಗೊತ್ತಿಲ್ಲದೆ ಇಂಥವರಿಗೆ ಅವಕಾಶ ಇಲ್ಲವೆನ್ನುವುದು ಬಹಳ ದೊಡ್ಡ ತಪ್ಪು ಎಂದು ಹೇಳಿದರು.
ಕಾಂಗ್ರೆಸ್‍ನ ದಲಿತ ವಿರೋಧಿ ನೀತಿ ಖಂಡಿಸಿದ್ದ ಡಾ.ಅಂಬೇಡ್ಕರ್: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು, ತಮ್ಮ ಜೀವಿತದ ಸಂಪೂರ್ಣ ಅವಧಿಯಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಅವರು ಎಲ್ಲಿ ಕೂಡ ಆರೆಸ್ಸೆಸ್ ಟೀಕಿಸಲಿಲ್ಲ. ಈ ಸಂದರ್ಭದಲ್ಲಿ ಆರೆಸ್ಸೆಸ್, ಅಂಬೇಡ್ಕರರ ಜೊತೆಗೆ ಗಟ್ಟಿಯಾಗಿ ನಿಂತಿತು. ಕಾಂಗ್ರೆಸ್ ಅವರನ್ನು ತುಳಿಯುವ ಕೆಲಸ ಮಾಡಿತು. ಕಾಂಗ್ರೆಸ್‍ನ ದಲಿತ ವಿರೋಧಿ ನೀತಿಯನ್ನು ಅಂಬೇಡ್ಕರ್ ವಿರೋಧಿಸುತ್ತಿದ್ದರು ಎಂದರು.
ಇದು ಕಾಂಗ್ರೆಸ್ ಸೃಷ್ಟಿತ ಸುಳ್ಳು ವದಂತಿ. ಗೂಳಿಹಟ್ಟಿಯವರು ತೊದಲುತ್ತಾ ಮಾತನಾಡಿದ್ದಾರೆ. ರಾತ್ರಿ 8ರ ನಂತರ ಮಾತನಾಡಿದ ಧ್ವನಿಯಂತಿದೆ. ಇದರ ಕುರಿತು ರಾಜ್ಯದ ಜನತೆ ತೀರ್ಮಾನಿಸಲಿ ಎಂದು ತಿಳಿಸಿದರು.
ಗೂಳಿಹಟ್ಟಿ ಶೇಖರ ಆರೋಪ ಸತ್ಯಕ್ಕೆ ದೂರ-ಅರವಿಂದ ಲಿಂಬಾವಳಿ: ಎಸ್ಸಿ ಎನ್ನುವ ಕಾರಣಕ್ಕೆ ನಾಗಪುರದ ಹೆಗಡೇವಾರ್ ಮ್ಯೂಸಿಯಂ ಒಳಗಡೆ ಬಿಡಲಿಲ್ಲ ಎಂಬ ಮಾಜಿ ಸಚಿವ ಗೂಳಿಹಟ್ಟಿ ಶೇಖರ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಳಿಹಟ್ಟಿ ಶೇಖರ್ ಅವರ ಹೇಳಿಕೆ ಶುದ್ಧ ಸುಳ್ಳು. ಅವರು ಯಾಕೆ ಹೀಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ನಾನು ಚಿಕ್ಕವನಿದ್ದಾಗಿನಿಂದ ಆರ್‌ಎಸ್ಸೆಸ್‌ನಲ್ಲಿದ್ದೇನೆ, ಎಲ್ಲಿಯೂ ಕೂಡ ಈ ರೀತಿ ಕಂಡುಬಂದಿಲ್ಲ. ದೇಶದ ಯಾವ ಭಾಗದಲ್ಲೂ ಈ ರೀತಿ ನಡೆದುಕೊಳ್ಳಲ್ಲ. ಈ ಹಿಂದೆ ಗಾಂಧೀಜಿಗೂ ಆರ್‌ಎಸ್ಸೆಎಸ್ ಬಗ್ಗೆ ಗೊತ್ತಿತ್ತು. ಅವರು ಒಮ್ಮೆ ಪರಿಶೀಲನೆ ಮಾಡಿದ್ದಾಗ ಸಂಘದಲ್ಲಿ ಜಾತಿ ವಿಚಾರ ಬಂದಿಲ್ಲ ಅಂತಾ ಹೇಳಿದ್ದರು ಎಂದರು.
ಇದನ್ನೂಓದಿ: ಗೂಳಿಹಟ್ಟಿಗೆ ಆರ್ಎಸ್ಎಸ್ ಕಚೇರಿ ಪ್ರವೇಶ ನಿರಾಕರಣೆ: ಬಿಜೆಪಿ ನಾಯಕರು ಹೇಳಿದ್ದೇನು?