ಬೆಂಗಳೂರು: ಕೊರೊನಾಗೆ ಇಡೀ ವಿಶ್ವವೇ ಹೈರಾಣಾಗಿ ಹೋಗಿದ್ದು, ಈ ವೈರಸ್ ಹೆಸರು ಕೇಳಿದ್ರೆ ಜನ ಬೆಚ್ಚಿ ಬೀಳ್ತಿದ್ದಾರೆ. ಹಾಗೆಯೇ ಕೊರೊನಾ ಪರಿಸ್ಥಿತಿ ಭಾರತದಲ್ಲೂ ಗಂಭೀರವಾಗಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಪ್ರಧಾನಿ ಕೂಡ ರಾಜ್ಯದಲ್ಲಿ ಕೊರೊನಾ ಕೇರ್ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸಿಸಿದ್ದಾರೆ. ಕೆಲವು ಕಡೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ವಿಳಂಬವಾಯಿತು ಅನ್ನುವುದು ಬಿಟ್ಟರೆ ಇತರೆ ರಾಜ್ಯಗಳಿಗಿಂತ ಉತ್ತಮ ಚಿಕಿತ್ಸೆ ರಾಜ್ಯದಲ್ಲಿ ಸಿಗುತ್ತಿದೆ.
ಈ ಚೀನಿ ವೈರಸ್ಗೆ ಇದುವರೆಗೂ ಔಷಧಿ ಸಿಕ್ಕಿಲ್ಲ. ಹಾಗಂತ ಮಾತ್ರಕ್ಕೆ ಗಾಬರಿ ಪಡುವ ಅವಶ್ಯಕತೆಯೂ ಇಲ್ಲ. ಯಾಕಂದ್ರೆ ಕೊರೊನಾ ವೈರಸ್ ಮಾರಣಾಂತಿಕ ಅಲ್ಲ. ಅದರ ಬಗ್ಗೆ ಹೆದರುವ ಬದಲು ಎಚ್ಚರಿಕೆ ವಹಿಸಿದ್ರೆ ನಮ್ಮ ಹತ್ತಿರನೂ ಅದು ಸುಳಿಯಲ್ಲ.
ಕೊರೊನಾ ಕೇರ್ ಸೆಂಟರ್ಗಳಲ್ಲಿ, ಸೊಂಕಿತರಿಗೆ ಆತ್ಮಸ್ಥೈರ್ಯ ಹೆಚ್ಚಿಸುವುದರ ಜೊತೆಗೆ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಬಹುತೇಕ ಕೊರೊನಾ ಕೇರ್ ಸೆಂಟರ್ಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ರೋಗಿಗಳು ಮಾನಸಿಕವಾಗಿ ಕುಗ್ಗದ ರೀತಿ ನೋಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿನಿತ್ಯ ಯೋಗ ಹಾಗೂ ಧ್ಯಾನ ಮಾಡಿಸುವುದರ ಮೂಲಕ ಮಾನಸಿಕವಾಗಿ ಅವರನ್ನು ಬಲ ಪಡಿಸುತ್ತಿದ್ದಾರೆ.
ಇದರ ಜೊತೆಗೆ ಅಂತ್ಯಾಕ್ಷರಿ ರೀತಿಯ ಆಟೋಟಗಳಲ್ಲಿ ರೋಗಿಗಳು ತೊಡಗುವಂತೆ ಮಾಡಿ, ಕೊರೊನಾ ವೈರಸ್ಗೆ ಚಿಕಿತ್ಸೆ ನೀಡ್ತಿದ್ದಾರೆ. ಪ್ರತಿನಿತ್ಯ ಉತ್ತಮ ಅಹಾರ ನೀಡಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಬಗ್ಗೆ ಜನರಲ್ಲಿ ಭಯದ ಜೊತೆ ಕೀಳರಿಮೆ ಇದೆ. ಆದ್ರೆ ಕೋವಿಡ್ ಕೇರ್ ಸೆಂಟರ್ಗಳ ಆರೈಕೆ ನೋಡಿದರೆ, ಕೊರೊನಾ ನೆಗಡಿ, ಶೀತಗಳಂತೆ ಒಂದು ವ್ಯಾಧಿ ಅಷ್ಟೇ. ಆದ್ದರಿಂದ ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಇರಬೇಕೆ ಹೊರತು, ಭಯ ಅಲ್ಲ ಎಂದು ವೈದ್ಯರು ಕೂಡ ಸಲಹೆ ನೀಡಿದ್ದಾರೆ.