ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದ ಪ್ರಮಾಣ ಹೆಚ್ಚಿಸಲು ಈ ವರ್ಷವೂ ಶೇ. 10 ರಷ್ಟು ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ನಿರ್ಧರಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಕ್ಕೂ ಕಡಿಮೆ ಅಥವಾ ಒಟ್ಟಾರೆ ಕನಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಕೃಪಾಂಕವನ್ನು ನೀಡುವ ಮೂಲಕ ಉತ್ತೀರ್ಣದ ಸಮೀಪಕ್ಕೆ ಬಂದು ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಅವಕಾಶ ಕಲ್ಪಿಸಿದೆ.
ಕೋವಿಡ್ ಕಾರಣದಿಂದಾಗಿ 2020ರಲ್ಲಿ ಪರೀಕ್ಷೆ ನಡೆಸದೆ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಲಾಗಿತ್ತು. ಆದರೆ 2021 ಮತ್ತು 2022 ರಲ್ಲಿ ಶೇ. 10 ರಷ್ಟು ಕೃಪಾಂಕ ನೀಡಿ ಅನುತ್ತೀರ್ಣಗೊಳ್ಳುವ ಹಂತದಲ್ಲಿದ್ದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರ ಮಾಡಲಾಗಿತ್ತು. ಕೋವಿಡ್ ಚೇತರಿಕೆ ನಂತರವೂ ಕಲಿಕೆ ಮೇಲೆ ಕೋವಿಡ್ ನಿಂದಾದ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಈ ವರ್ಷವೂ ಕೃಪಾಂಕ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಕೃಪಾಂಕ ನೀಡುವ ಕುರಿತು ಮೌಲ್ಯಮಾಪಕರಿಗೆ ಮೌಖಿಕ ಸೂಚನೆ ನೀಡಲಿದ್ದು, ಅದರಂತೆ ಮೌಲ್ಯಮಾಪನ ಕಾರ್ಯ ಮುಗಿದ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸುವ ವೇಳೆ ಉತ್ತೀರ್ಣಕ್ಕೆ ಬೇಕಾದ ಕನಿಷ್ಠ ಅಂಕ ಪಡೆಯುವ ಸಮೀಪದ ಅಂಕ ಗಳಿಸಿದವರಿಗೆ ಕೃಪಾಂಕ ಸೇರಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.
ಯಾರಿಗೆ ಕೃಪಾಂಕ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 6 ವಿಷಯಗಳಲ್ಲಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿ ಉಳಿದ ಮೂರು ವಿಷಯಗಳಿಗೆ ಕನಿಷ್ಠ 1 ರಿಂದ ಗರಿಷ್ಠ 26 ಅಂಕಗಳವರೆಗೆ ಕೃಪಾಂಕ ಪಡೆಯಬಹುದಾಗಿದೆ. ಇಂತಹ ವಿದ್ಯಾರ್ಥಿಗಳಿಗೆ 625 ಅಂಕಗಳಿಗೆ ಕನಿಷ್ಠ 219 ಅಂಕ ಪಡೆಯಲು ಬೇಕಾಗುವ ಅಂಕಗಳನ್ನು ನೀಡಲಾಗುತ್ತದೆ. 100 ಅಂಕಗಳ ವಿಷಯಕ್ಕೆ 80 ಅಂಕಕ್ಕೆ ಲಿಖಿತ ಪರೀಕ್ಷೆ 20 ಅಂಕಕ್ಕೆ ಮೌಖಿಕ ಪರೀಕ್ಷೆ ಇರಲಿದೆ. ಇದರಲ್ಲಿ 80 ಅಂಕಕ್ಕೆ ಕನಿಷ್ಠ 28 ಅಂಕ ಪಡೆದಿರಬೇಕು. ಆದರೆ ಕೆಲ ವಿದ್ಯಾರ್ಥಿಗಳು ಕೆಲ ವಿಷಯದಲ್ಲಿ ಇದಕ್ಕಿಂತ ಹೆಚ್ಚು, ಕೆಲ ವಿಷಯದಲ್ಲಿ ಇದಕ್ಕಿಂತ ಕಡಿಮೆ ಅಂಕ ಪಡೆದಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಈ ಕೃಪಾಂಕದಿಂದ ಉತ್ತೀರ್ಣರಾಗಲು ಅವಕಾಶ ಸಿಗಲಿದೆ.
ದ್ವಿತೀಯ ಪಿಯುಸಿಗೂ ಕೃಪಾಂಕ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 5 ರಷ್ಟು ಕೃಪಾಂಕ ನೀಡಲಾಗುತ್ತದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ, 600 ಅಂಕಗಳಿಗೆ ಕನಿಷ್ಠ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದಲ್ಲಿ ಶೇ. 5 ರಷ್ಟು ಅಂಕ ನೀಡಲಾಗುತ್ತದೆ. ಈ ಕೃಪಾಂಕದಿಂದ ಆ ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸಲಾಗುತ್ತದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಗಣಿತ ಸಮಾಜಶಾಸ್ತ್ರ ಪರೀಕ್ಷೆ: 1 ಡಿಬಾರ್, 13765 ವಿದ್ಯಾರ್ಥಿಗಳು ಗೈರು