ಬೆಂಗಳೂರು: ಕೆಲ ಇಲಾಖೆಗಳಲ್ಲಿ ಆಯ್ಕೆ ಪ್ರಕ್ರಿಯೆ ಮುಗಿದಿದ್ದರೂ ನೇಮಕಾತಿ ಆದೇಶ ಹೊರಬೀಳದೆ ಕಂಗೆಟ್ಟಿದ್ದ ಅಭ್ಯರ್ಥಿಗಳಿಗೆ ಆರ್ಥಿಕ ಇಲಾಖೆ ಸಿಹಿ ಸುದ್ದಿ ನೀಡಿದೆ.
ಆಯ್ಕೆ ಪ್ರಕ್ರಿಯೆ ಮುಗಿದಿದ್ದರೂ ಇನ್ನೂ ನೇಮಕಾತಿ ಆದೇಶ ನೀಡಿಲ್ಲ ಎಂದು ಪಿಯು ಉಪನ್ಯಾಸಕರು ಕೆಲವು ದಿನಗಳಿಂದ ಪಿಯು ಮಂಡಳಿ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೀಗ ಆರ್ಥಿಕ ಇಲಾಖೆ ಅವರಿಗೆ ಸಿಹಿ ಸುದ್ದಿ ನೀಡಿದೆ. ಈ ಸಂಬಂಧ ಸುತ್ತೋಲೆ ಕೂಡ ಹೊರಡಿಸಿದೆ.
![Circular](https://etvbharatimages.akamaized.net/etvbharat/prod-images/kn-bng-08-appointmentorder-govtcircular-script-7201951_23102020222337_2310f_1603472017_653.jpg)
ಆರ್ಥಿಕ ಇಲಾಖೆ, ರಾಜ್ಯ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಇನ್ನಿತರೆ ಆಯ್ಕೆ ಮಂಡಳಿಗಳಿಂದ ಆಯ್ಕೆಗೊಂಡು, ಆಡಳಿತ ಇಲಾಖೆಯು ಆಯ್ಕೆಪಟ್ಟಿಯಲ್ಲಿನ ಕೆಲವು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದೆ. ಆದರೆ, ಕಾರಣಾಂತರಗಳಿಂದ ಇನ್ನೂ ಕೆಲವು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದೆ ಬಾಕಿ ಉಳಿದಿರುವ ಪ್ರಕರಣಗಳಿವೆ. ಇಂತಹ ಪ್ರಕರಣಗಳ ಬಗ್ಗೆ ಆಡಳಿತ ಇಲಾಖೆಗಳು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ, ಆ ಪ್ರಸ್ತಾವನೆಗಳನ್ನು ಪರಿಶೀಲಿಸಿ ಅಭ್ಯರ್ಥಿಗಳ ಸೇವಾಹಿರಿತನದಲ್ಲಿ ತೊಂದರೆ ಆಗಬಾರದೆಂಬ ಅಂಶ ಪರಿಗಣಿಸಿ ಕೆಲವು ಇಲಾಖೆಗಳಲ್ಲಿ ಬಾಕಿ ಉಳಿದಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಸಹಮತಿ ನೀಡಲಾಗುವುದು ಎಂದು ತಿಳಿಸಿದೆ.
ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದು ಬಾಕಿ ಇರುವ ಪ್ರಸ್ತಾವನೆಗಳು ಇದ್ದಲ್ಲಿ ಅಂತಹ ಪ್ರಸ್ತಾವನೆಗಳನ್ನು ಸೂಕ್ತ ದಾಖಲೆ ಮತ್ತು ಇಲಾಖಾ ಕಾರ್ಯದರ್ಶಿಯವರ ಶಿಫಾರಸ್ಸಿನೊಂದಿಗೆ ಮುಂದಿನ ಪರಿಶೀಲನೆಗಾಗಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಡಲು ಕೋರಿದೆ. ಇದರಿಂದಾಗಿ ನೇಮಕಾತಿ ಆದೇಶ ಹೊರಡಿಸಿಲ್ಲ ಎಂದು ಪ್ರತಿಭಟನೆ ನಡೆಸಿದ್ದ ಪಿಯು ಉಪನ್ಯಾಸಕರು ನಿಟ್ಟುಸಿರು ಬಿಡುವಂತಾಗಿದೆ.
ಜುಲೈ 7ರಂದು ಆರ್ಥಿಕ ಸಂಕಷ್ಟ ಹಿನ್ನೆಲೆ ಮಿತವ್ಯಯ ಪಾಲಿಸುವ ಸಲುವಾಗಿ 2020-21ರಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆಹಿಡಿದು ಆದೇಶಿಸಲಾಗಿತ್ತು. ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಯು ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಸಹ ಈ ಆದೇಶ ಅನ್ವಯವಾಗುತ್ತದೆ ಎಂದು ತಿಳಿಸಲಾಗಿತ್ತು.