ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡುವ ಸೌಲಭ್ಯ, ಧನಸಹಾಯ ಹೆಚ್ಚಿಸುವ ನಿಟ್ಟಿನಲ್ಲಿ ನಿಯಮಗಳಿಗೆ ತಿದ್ದುಪಡಿ ತರಲು ಸಂಪುಟ ಸಭೆ ನಿರ್ಧರಿಸಿದೆ. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವಾರು ಧನ ಸಹಾಯ ಹಾಗೂ ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಮಾಡಲಾಗುತ್ತಿದೆ.
ಕಾರ್ಮಿಕರಿಗೆ ನೀಡಲಾಗುತ್ತಿರುವ ಧನಸಹಾಯ ಹಾಗೂ ಸಾಮಾಜಿಕ ಭದ್ರತೆ ಮೊತ್ತವನ್ನು ಕಾಲ ಕಾಲಕ್ಕೆ ಹೆಚ್ಚಿಸಬೇಕಿರುತ್ತದೆ. ಕಾಯ್ದೆಯನ್ವಯ ಮಂಡಳಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೆಲ ತಿದ್ದುಪಡಿಗಳನ್ನು ತರಲಾಗುತ್ತಿದೆ.
ಈ ನಿಟ್ಟಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕರ್ನಾಟಕ ನಿಯಮಗಳು 2006ರ ನಿಯಮಗಳಿಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಈ ತಿದ್ದುಪಡಿಗಳಲ್ಲಿ ಮಂಡಳಿ ವತಿಯಿಂದ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಧನ ಸಹಾಯದ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಇದಲ್ಲದೇ ಕೆಲವು ನಿಯಮಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಸರಳೀಕರಿಸಲಾಗುತ್ತಿದೆ.
ಪ್ರಸ್ತಾಪಿತ ತಿದ್ದುಪಡಿ ಏನಿದೆ?:
- ಫಲಾನುಭವಿಯು ನೋಂದಣಿ ಸಮಯದಲ್ಲಿ ಪಾವತಿಸಬೇಕಾದ ವಂತಿಕೆ ಹಣವನ್ನು ಕೈಬಿಡುವ ಬಗ್ಗೆ
- ಅನರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗುವುದನ್ನು ತಡೆಗಟ್ಟುವ ಬಗ್ಗೆ
- ಮಂಡಳಿಯ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ 2,000 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಲು ತಿದ್ದುಪಡಿ
- ಗೃಹ ಭಾಗ್ಯ ಸೌಲಭ್ಯದಡಿ 21ರಿಂದ 50 ವರ್ಷದ ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಲು ಸಾಲ/ಮುಂಗಡ ನೀಡಲು ಮತ್ತು 10 ಕಂತುಗಳಲ್ಲಿ ಸಂದಾಯ ಮಾಡಲು ನಿಯಮವನ್ನು ಸರಳೀಕರಣಗೊಳಿಸಲು ತಿದ್ದುಪಡಿ
- ಹೆರಿಗೆ ಸೌಲಭ್ಯದಡಿ ಹೆರಿಗೆ ಸಹಾಯ ಧನವನ್ನು ಹೆಣ್ಣು/ಗಂಡು ಮಗು ಎಂಬ ಭೇದವಿಲ್ಲದೇ 50,000 ರೂ.ಗಳಿಗೆ ಹೆಚ್ಚಿಸಲು ತಿದ್ದುಪಡಿ
- ಸಂಸ್ಕಾರ-ವೆಚ್ಚ ಸೌಲಭ್ಯದಡಿ ಪ್ರಸ್ತುತ ಇರುವ ಸಹಾಯಧನದ ಮೊತ್ತ 50,000 ರೂ.ಗಳಿಂದ 71,000 ರೂ.ಗಳಿಗೆ ಹೆಚ್ಚಿಸಲು ತಿದ್ದಪಡಿ
- ಕೋವಿಡ್‌ನಿಂದ ಫಲಾನುಭವಿಯು ಮೃತ್ತಪಟ್ಟಲ್ಲಿ ಅವರ ಅವಲಂಬಿತರಿಗೆ 2 ಲಕ್ಷ ರೂ.ಗಳ ಸಹಾಯಧನ ನೀಡಲು ಪ್ರಸ್ತಾಪ
- ಮಂಡಳಿಯ ಫಲಾನುಭವಿಯ ಮಕ್ಕಳಿಗೆ ಕಲಿಕಾ ಕಿಟ್, ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್ ನೀಡುವ ಕುರಿತು
- ವೈದ್ಯಕೀಯ ಸೌಲಭ್ಯದಡಿ ಸಹಾಯಧನ 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಿಸಲು ತಿದ್ದುಪಡಿ
- ನೋಂದಾಯಿತ ಫಲಾನುಭವಿಯು ಕೆಲಸ ಮಾಡುವ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟರೆ ಅವರ ಅವಲಂಬಿತರಿಗೆ ಪ್ರಸ್ತುತ ಪಾವತಿಸುತ್ತಿರುವ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲು ತಿದ್ದುಪಡಿ
- ಮದುವೆ ಸಹಾಯ ಧನವನ್ನು 50,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲು ತಿದ್ದುಪಡಿ
- ಫಲಾನುಭವಿ ವಿವಿಧ ಸೌಲಭ್ಯಗಳಡಿ ಸಹಾಯ ಕೋರಿ ಅರ್ಜಿ ಸಲ್ಲಿಸಿದಾಗ ಅವರ ಮಂಜೂರಾತಿ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಅಪೀಲ್ ಸಲ್ಲಿಸಲು ಅವಕಾಶ
- ಅನಿಲ ಭಾಗ್ಯ ಸೌಲಭ್ಯವನ್ನು ಕೈಬಿಡುವ ಬಗ್ಗೆ ತಿದ್ದುಪಡಿ
- ಕೆಎಸ್‌ಆರ್‌ಟಿಸಿ ಸೌಲಭ್ಯದಡಿ ಪಲಾನುಭವಿಗಳಿಗೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಪಾಸ್ ಸೌಲಭ್ಯ ಒದಗಿಸುವ ಪ್ರಸ್ತಾಪ
ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ಒಪ್ಪದಿರಲು ಸಂಪುಟ ಸಭೆಯಲ್ಲಿ ತೀರ್ಮಾನ: ಜೆ.ಸಿ. ಮಾಧುಸ್ವಾಮಿ