ಬೆಂಗಳೂರು : ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳ ಸಂಖ್ಯೆ ಈಗ 18.9 ದಶಲಕ್ಷಕ್ಕೆ ಏರಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ತಿಳಿಸಿದೆ.
ಉದ್ಯೋಗ ಕೊಡಿ ಟ್ವೀಟ್ ಅಭಿಯಾನದ ಮೂಲಕ ಇಂದು ಮಾಹಿತಿ ನೀಡಿರುವ ಪಕ್ಷ, ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏಪ್ರಿಲ್‌ನಿಂದ 1.89 ಕೋಟಿಗೆ ಏರಿದೆ. ಕೇಂದ್ರ ಬಿಜೆಪಿ ಸರ್ಕಾರ ಎಚ್ಚರಗೊಂಡು ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ರೂಪಿಸುವುದು ಯಾವಾಗ? ಎಂದು ಪ್ರಶ್ನಿಸಿದೆ.
ಕೊರೊನಾ ಬಗ್ಗೆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲೇ ಎಚ್ಚರಿಸಿದ್ದರು. ಕೊರೊನಾಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ, ಕೇಂದ್ರದ ಅವೈಜ್ಞಾನಿಕ ನೀತಿಗಳಿಂದ ಆರ್ಥಿಕ ಸುನಾಮಿ ಎದುರಿಸಬೇಕಾಗುತ್ತದೆ ಎಂದು ಮುನ್ನೆಚ್ಚರಿಕೆ ಕೊಟ್ಟಿದ್ದರು. ಆದರೂ ಸಹ ನಿರ್ಲಕ್ಷ್ಯ ತೋರಿದ ಕೇಂದ್ರ ಸರ್ಕಾರ ಈಗ "ದೇವರ ಆಟ" ಎಂದು ಜನತೆಯ ಕಣ್ಣಿಗೆ ಮಣ್ಣೆರಚುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.