ಬೆಂಗಳೂರು: ನಿಯಮ 69ರಡಿ ಕಾನೂನು ಸುವ್ಯವಸ್ಥೆ ಮೇಲಿನ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು. ನಿನ್ನೆ ಮುಸ್ಲಿಂ ಗುರುಗಳನ್ನು ಭೇಟಿಯಾಗಿದ್ದೆ, ಅವರು ಸಮವಸ್ತ್ರ ಬಣ್ಣದ ದುಪ್ಪಟ್ಟಾ ಹಾಕಲು ಅವಕಾಶ ಮಾಡಿಕೊಡಬೇಕೆಂಬ ಸಲಹೆ ನೀಡಿದ್ದಾರೆ. ಹಾಗಾಗಿ ಯುನಿಫಾರ್ಮ್ ಬಣ್ಣದ ದುಪ್ಪಟ್ಟಾ ಧರಿಸಿ ಪರೀಕ್ಷೆ ಬರೆಯಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಯುನಿಫಾರ್ಮ್ ಭಾಗವಾದ ದುಪ್ಪಟ್ಟಾವನ್ನು ಧರಿಸಲು ಅವಕಾಶ ಮಾಡಿಕೊಡಬೇಕು. ದುಪ್ಪಟ್ಟಾ ಬೇರೆ, ಸ್ಕಾರ್ಪ್ ಬೇರೆ, ಹಿಜಾಬ್ ಬೇರೆ. ದುಪ್ಪಟ್ಟಾ ಹಾಕಲು ಅವಕಾಶ ಮಾಡಿಕೊಡುವ ಮೂಲಕ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದರು. ದುಪ್ಪಟ್ಟಾ ಹಾಕಿದ ಹುಡುಗಿಯ ಫೋಟೋವನ್ನು ತೋರಿಸಿದ ಸಿದ್ದರಾಮಯ್ಯ, ನಾನು ಶಲ್ಯವನ್ನು ಹಿಂಗೆ ಹಾಕಿದ್ದೇನೆ. ಅದನ್ನು ಹಿಂದಕ್ಕೆ ಹಾಕಬೇಕು ಎಂದು ತಮ್ಮ ಶಲ್ಯವನ್ನೇ ಬದಲಾಯಿಸಿ ತೋರಿಸಿದರು. ಮೊದಲಿನಿಂದಲೂ ಹಿಜಾಬ್ ಹಾಕಿಕೊಂಡು ಬರುವವರು ಹಾಕುತ್ತಾರೆ. ಶಿಕ್ಷಣ ವಂಚಿತರಾದರೆ ಅವರ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆ. ಶಿಕ್ಷಣ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಧರ್ಮ ಗುರುಗಳನ್ನು ಕರೆದು ಅವರ ಬಳಿ ಮಾತನಾಡಿ ಎಂದು ಇದೇ ವೇಳೆ ಸಲಹೆ ನೀಡಿದರು.
ಪರಿಹಾರದಲ್ಲಿ ತಾರತಮ್ಯ: ಕೊಲೆಯಾದ ಹರ್ಷ ಕುಟುಂಬಸ್ತರಿಗೆ 25 ಲಕ್ಷ ಪರಿಹಾರ ಕೊಟ್ಟಿದ್ದೀರಾ. ಇದಾದ ಮೂರು ದಿನದ ಬಳಿಕ ಬೆಳ್ತಂಗಡಿಯಲ್ಲಿ ದಿನೇಶ್ ಎಂಬುವನ ಕೊಲೆ ಆಗುತ್ತೆ. ಅವನು ಎಸ್ಟಿ ಸಮುದಾಯಕ್ಕೆ ಸೇರಿದವನಾಗಿದ್ದ. ಆತನ ಕುಟುಂಬಸ್ಥರಿಗೆ 4 ಲಕ್ಷ ಪರಿಹಾರ ಕೊಟ್ಡಿದ್ದೀರಾ. ಅಲ್ಲಿ 25 ಲಕ್ಷ ರೂ. ಕೊಟ್ಡಿದ್ದೀರಾ. ಇಲ್ಲಿ ದಿನೇಶ್ ಗೆ ಕೇವಲ 4 ಲಕ್ಷ ರೂ. ಕೊಟ್ಟಿದ್ದೀರಾ. ದಿನೇಶ್ಗೂ 25 ಲಕ್ಷ ಕೊಡಬೇಕಿತ್ತಲ್ಲಾ?. ದಲಿತ ಅಂತ ಕೊಟ್ಟಿಲ್ವಾ?. ಆತ ಬಜರಂಗ ದಳಕ್ಕೆ ಸೇರಿಲ್ಲಾ ಅಂತ ಕೊಟ್ಟಿಲ್ವಾ?. ಈ ತಾರತಮ್ಯ ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆ.. ತಮಿಳುನಾಡು ನಿರ್ಣಯ ಖಂಡಿಸಿ ಸದನದಲ್ಲಿ ಸರ್ವಾನುಮತದ ನಿರ್ಣಯ
ನರಗುಂದದಲ್ಲಿ ಶಮೀರ್ ಶುಬಾನ್ ಸಾಬ್ ಎಂಬವನ ಕೊಲೆ ಆಗಿತ್ತು. ಅದರ ಹಿಂದೆ ಸಂಘ ಪರಿವಾರದ ಚಿತಾವಣೆ ಇದೆ. ಸಂಶೀರ್ ಖಾನ್ ಪಠಾಣ್ ಪ್ರತ್ಯಕ್ಷ ದರ್ಶಿಯಾಗಿದ್ದ. ಅವರು ಪೊಲೀಸರ ಮುಂದೆ ಸಂಜೀವ್ ಎಂಬಾತ ಇದರ ಹಿಂದೆ ಇದ್ದಾನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಬೇಕಿತ್ತು. ಅದನ್ನೂ ಕೊಟ್ಟಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಇದೆನಾ?. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಅಲ್ಲದೆ, ಜನ ರಕ್ಷಣೆ ಇಲ್ಲ ಅಂತ ಆತಂಕದಲ್ಲಿ ಇದ್ದಾರೆ. ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ. ಅಭಿವೃದ್ಧಿಗೂ ಕಾನೂನು ಸುವ್ಯವಸ್ಥೆಗೆ ನೇರ ಲಿಂಕ್ ಇದೆ. ನಾನು ಗೃಹ ಸಚಿವ ಆರಗ ರಾಜೀನಾಮೆ ಕೇಳುವುದಿಲ್ಲ. ಅವರ ಆತ್ಮ ಸಾಕ್ಷಿಗೆ ಬಿಡುತ್ತೇನೆ ಎಂದರು.