ಬೆಂಗಳೂರು : ಬೇರೆ ಬೇರೆ ಪ್ರಕರಣಗಳಲ್ಲಿ 25 ಲಕ್ಷ ರೂ. ಪರಿಹಾರ ಕೊಡುವಂತೆ ಪಟಾಕಿ ದುರಂತದಲ್ಲಿ ಮೃತಪಟ್ಟವರಿಗೆ 25 ಲಕ್ಷದವರೆಗೂ ಪರಿಹಾರ ಕೊಡಬೇಕು. ಗಾಯಾಳುಗಳಿಗೆ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ದುರಂತಕ್ಕೆ ಕಾರಣರಾದ ಮಾಲೀಕರ, ಅಧಿಕಾರಿಗಳ ವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಮಾಜಿ ಸಚಿವ ಸಿ.ಟಿ ರವಿ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ತಿಬೆಲೆಯಲ್ಲಿ 14 ಜನ ಪ್ರಾಣ ಕಳೆದುಕೊಂಡಿರುವುದು ದುರಂತ. ಮೃತರ ಕುಟುಂಬಸ್ಥರಿಗೆ ದು:ಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ. ಇಲ್ಲಿ ಮಾಲೀಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜನವಸತಿ ಪ್ರದೇಶದಲ್ಲಿ ಪಟಾಕಿಗಳ ಸಂಗ್ರಹಕ್ಕೆ ಅನುಮತಿ ಕೊಟ್ಟಿದ್ದೇಕೆ? ಮೃತರು ಕೂಲಿ ಕಾರ್ಮಿಕರು, ಇಂಥ ಅನಾಹುತ ಬೇರೆಲ್ಲೂ ಆಗದಂತೆ ತಡೆಯುವುದು ಸರ್ಕಾರದ ಕರ್ತವ್ಯ ಎಂದರು.
ಶಾಮನೂರು ಶಿವಶಂಕರಪ್ಪ ಆರೋಪ : ಲಿಂಗಾಯತರ ಕಡೆಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಕಾಂಗ್ರೆಸ್‌ನಲ್ಲಿ ಈಗ ಜಾತಿ ಗಣತಿ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಜಾತಿ ಲೇಬಲ್ ಹಾಕಿ ಪೋಸ್ಟಿಂಗ್ ಕೊಡುತ್ತಿದ್ದಾರೆ. ಇದು ಯಾವ ಸೀಮೆ ಜಾತ್ಯತೀತತೆ..? ಜಾತಿ ಮೇಲೆ ಪೋಸ್ಟಿಂಗ್ ಕೊಡೋದು ಏನಿದು? ಇಷ್ಟಾದ ಮೇಲೂ ಇವರು ಜಾತ್ಯತೀತರಾ? ಎಂದು ಪ್ರಶ್ನಿಸಿರುವ ಸಿ ಟಿ ರವಿ ಇದು ವಿಶ್ವಾಸಾರ್ಹತೆ ಇಲ್ಲದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ಗೆ ಇವಿಎಂ ಮೇಲೆ ಪ್ರೀತಿ ಬಂದಿದೆ. ಮುಂಚೆ ಇವಿಎಂ ಟ್ಯಾಂಪರಿಂಗ್ ಆಗಿದೆ ಅಂತ ವಿರೋಧಿಸುತ್ತಿದ್ದರು. ಈಗ ಯಾವ ಜಾತಿ ಎಷ್ಟು ಮತ ಹಾಕಿದ್ದಾರೆ ಅಂತ ಹೇಳುತ್ತಿದ್ದಾರೆ. ಮತ ಹಾಕಿರೋದು ಗುಪ್ತವಾಗಿರುತ್ತದೆ. ಇವರಿಗೆ ಹೇಗೆ ಸಿಕ್ತು? ಚೀನಾದಿಂದ ಟ್ಯಾಂಪರಿಂಗ್ ಮಾಡೋದನ್ನು ಕಲಿತು ಬಂದ್ರಾ ಇವರು? ಪ್ರಕಾಶ್ ರಾಥೋಡ್ ಪ್ರಕಾರವೇ ಅವರ ಪಕ್ಷ ಮುಸ್ಲಿಮರಿಗೂ ಅನ್ಯಾಯ ಮಾಡಿದೆ. 88% ಮತ ಹಾಕಿದರೂ ಎರಡೇ ಸಚಿವ ಸ್ಥಾನ ಕೊಟ್ಟಿರೋದು ಅವರಿಗೆ ಮಾಡಿದ ಅನ್ಯಾಯ ಅಂತ ಅವರೇ ಹೇಳಿಕೊಂಡಿದ್ದಾರೆ ಎಂದು ಸಿ ಟಿ ರವಿ ಕಿಡಿಕಾರಿದರು.
ಮದ್ಯದ ವಿಚಾರದಲ್ಲಿ ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡುತ್ತೇನೆ ಅನ್ನೋ ನಿಲುವಾಗಿದೆ. ಹಳ್ಳಿಗಳಿಗೆ ಈಗಾಗಲೇ ಅನಧಿಕೃತವಾಗಿ ಮದ್ಯ ಪೂರೈಕೆ ಆಗುತ್ತಿದೆ. ಮಾಲ್, ಸೂಪರ್ ಮಾರ್ಕೆಟ್ಗಳಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೂ ಇವರು ತಮ್ಮನ್ನು ಗಾಂಧಿವಾದಿಗಳು ಅಂತಾರೆ. ಗೋಡ್ಸೆ ಒಂದು ಸಲ ಗಾಂಧಿಗೆ ಗುಂಡು ಹೊಡೆದರು. ಆದರೆ ಇವರು ಗಾಂಧಿವಾದಿಗಳು ಅಂತ ಕರೆಸಿಕೊಂಡೇ ಗಾಂಧಿ ವಿಚಾರಗಳಿಗೆ ಗುಂಡು ಹೊಡೀತಾನೇ ಇದ್ದಾರೆ. ಈ ಗಾಂಧಿವಾದಿಗಳು ಊರೂರಿಗೆ ಮದ್ಯದಂಗಡಿ ಲೈಸೆನ್ಸ್ ಕೊಡುತ್ತಿದ್ದಾರೆ. ಇದು ಆರನೇ ಗ್ಯಾರಂಟಿ ಇರಬೇಕು ಎಂದು ಬಿಜೆಪಿ ನಾಯಕ ವ್ಯಂಗ್ಯವಾಡಿದರು.
ಮೈತ್ರಿ ಮಾತುಕತೆಯಲ್ಲಿ ರಾಜ್ಯ ನಾಯಕರನ್ನು ಪರಿಗಣಿಸಿಲ್ಲ ಎನ್ನುವ ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಸದಾನಂದಗೌಡರು ಹಿರಿಯರು, ಮಾಜಿ ಸಿಎಂ ಆಗಿದ್ದವರು. ಅವರು ಅವರ ಭಾವನೆ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ. ನನ್ನ ಭಾವನೆಗಳನ್ನು ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳುತ್ತೇನೆ ಎಂದರು.
ರಾಜ್ಯಾಧ್ಯಕ್ಷ ಕಟೀಲ್ ಬದಲಾವಣೆ ಆಗಬೇಕು, ಕಾರ್ಯಕರ್ತರು ನೊಂದಿದ್ದಾರೆ ಎಂದು ಡಿ ವಿ ಸದಾನಂದಗೌಡ ಹೇಳಿದ್ದಾರೆ, ಈಗ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಜವಾಬ್ದಾರಿಯಿಂದ ಮುಕ್ತ ಮಾಡಿ ಅಂತ ಹೈಕಮಾಂಡ್ಗೆ ಕಟೀಲ್ ಸಹ ಕೇಳಿಕೊಂಡಿದ್ದಾರೆ. ವರಿಷ್ಠರು ಯಾವಾಗ ನಿರ್ಣಯ ಮಾಡುತ್ತಾರೋ ಗೊತ್ತಿಲ್ಲ. ಈಗ ಕಟೀಲ್ ಅವರು ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ಮೇಲೆ ಆ ಸ್ಥಾನಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದು ರವಿ ಅವರು ಪರೋಕ್ಷವಾಗಿ ಟಾಂಗ್ ಕೊಟ್ಟರು.
ಇದನ್ನೂ ಓದಿ : ಅತ್ತಿಬೆಲೆ ಪಟಾಕಿ ದುರಂತ: ಎಫ್ಐಆರ್ ದಾಖಲು, ಅಂಗಡಿ ಮಾಲೀಕ - ಪುತ್ರನ ಬಂಧನ - ಡಿಜಿಪಿ ಅಲೋಕ್ ಮೋಹನ್ ಮಾಹಿತಿ