ಬೆಂಗಳೂರು: ಆಕೆ ಅವನಾಗಿರುವ ಕಥೆಯೇ ರೋಚಕ. ಇದು ಅಂತಿಂಥ ಆಪರೇಷನ್ ಅಲ್ಲ. ಅಪರೂಪದಲ್ಲೊಂದು ಅಪರೂಪ ಈ ಶಸ್ತ್ರಚಿಕಿತ್ಸೆ. ವೈದ್ಯ ಲೋಕದ ಅತ್ಯಂತ ಕ್ಲಿಷ್ಟಕರ್ ಶಸ್ತ್ರಚಿಕಿತ್ಸೆಗಳಲ್ಲೊಂದು ಇದು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ನಡೆದ ಆ ಸುದೀರ್ಘಾವಧಿಯ ಶಸ್ತ್ರ ಚಿಕಿತ್ಸೆಯ ಬಗ್ಗೆ ನೀವು ತಿಳಿಯಲೇ ಬೇಕು.
ಲೈಂಗಿಕ ಬೆಳವಣಿಗೆಯಲ್ಲಿ ಏರು-ಪೇರು (ಡಿಎಸ್‌ಡಿ) ಹೊಂದಿದ್ದ 20 ವರ್ಷದ ಆಕೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೊಳಗಾಗಿ ಈಗ ಅವನಾದ್ದಾನೆ. ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ಡಾ.ಮೋಹನ್ ಕೇಶವಮೂರ್ತಿ ಮತ್ತು ಡಾ.ಬಸವರಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಷ್ಟಕ್ಕೂ ಇದರಲ್ಲೇನು ವಿಶೇಷ, ಯಾಕಿಷ್ಟು ಕ್ಲಿಷ್ಟಕರ ಎಂಬುದಕ್ಕೆ ಉತ್ತರ ಇಲ್ಲಿದೆ.
ಲೈಂಗಿಕ ಪರಿವರ್ತನೆ ಅವಶ್ಯಕತೆ ಏನಿತ್ತು?
ಶಸ್ತ್ರ ಚಿಕಿತ್ಸೆಯ ಬಗ್ಗೆ ಹೇಳುವ ಮುನ್ನ ನಾವು ನಿಮಗೆ ಲೈಂಗಿಕ ಬದಲಾವಣೆಗೆ ಅವಶ್ಯಕತೆ ಏನಿತ್ತು ಎಂಬುದನ್ನು ತಿಳಿಸುತ್ತೇವೆ. 20 ವರ್ಷದ ಯುವತಿಯಲ್ಲಿ ಲೈಂಗಿಕ ವಿಕಸನ ತೊಂದರೆ ಅಂದರೆ DSD (Disorder of Sex Development) ಸಮಸ್ಯೆಯಿತ್ತು. ಇದು ವರ್ಣತಂತುಗಳಲ್ಲಿ ಹೊಂದಾಣಿಕೆ ಕೊರತೆ, ಲೈಂಗಿಕ ಸ್ವರೂಪದಲ್ಲಿ ಹೊಂದಾಣಿಕೆ ಕೊರತೆ ಹೊಂದಿರುವ ದೇಹದ ಅಪರೂಪದ ಸ್ಥಿತಿ. ಯಾರೇ ವ್ಯಕ್ತಿ ತನ್ನ ಬಾಲ್ಯದಲ್ಲಿ ಅಥವಾ ಅಪ್ರಾಪ್ತ ವಯಸ್ಸಿನ ಅವಧಿಯಲ್ಲಿ ಇಂತಹ ಏರು - ಪೇರುಗಳಿಗೆ ತುತ್ತಾಗಬಹುದು. ಇಂತಹುದೇ ಸಮಸ್ಯೆ ಈ ಯುವತಿಗೆ 10ನೇ ವಯಸ್ಸಿನಿಂದಲೇ ಆರಂಭವಾಗಿದೆ. ಬಳಿಕ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಬೇಸತ್ತ 20 ವರ್ಷದ ಯುವತಿ, ತನ್ನ ಸ್ಥಿತಿಯನ್ನು ಸರಿಪಡಿಸುವಂತೆ ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೊರೆ ಹೋಗಿದ್ದರು.
ಈಕೆಯನ್ನು ಪರಿಶೀಲಿಸಿದ ತಜ್ಞ ವೈದ್ಯರು ಆಕೆಯಲ್ಲಿ ಪುರುಷ ಸೂಡೊಹೆರ್ಮಾಫ್ರೋಡಿಟಿಸಮ್ (Male pseudohermaphroditism) ಅಂದರೆ ಯುವತಿಯ ಗೊನಾಡ್ಸ್ (ಗಂಡು ಅಥವಾ ಹೆಣ್ಣಿನ ಪ್ರಾಥಮಿಕ ಸಂತಾನೋತ್ಪತ್ತಿ ಅಂಗಗಳು) ಅಂಡಾಶಯ (ovaries/ಹೆಣ್ಣು ಸಂತಾನೋತ್ಪತ್ತಿ ಅಂಗ) ಗಳಾಗಿರುವ ಬದಲು ವೃಷಣ (testes/ಪುರುಷ ಸಂತಾನೋತ್ಪತ್ತಿ ಅಂಗ) ಗಳಾಗಿವೆ. ಆದರೆ, ಅವರ ದ್ವಿತೀಯ ಲೈಂಗಿಕ ಗುಣಲಕ್ಷಣಗಳು ಅಥವಾ ಬಾಹ್ಯ ಜನನಾಂಗಗಳು ಹೆಣ್ಣನ್ನು ಹೋಲುತ್ತವೆ. ಲೈಂಗಿಕ ಅಂಗಾಂಗಗಳು ಪುರುಷರನ್ನ ಹೋಲುತ್ತಿದ್ದರೂ ಬಾಹ್ಯ ಸ್ವರೂಪ ಮಹಿಳೆಯಂತೆ ಕಂಡು ಬರುವ ಒಂದು ಸ್ಥಿತಿ ಇದು. ಈ 20 ವರ್ಷದ ಯುವತಿ ಇಂತಹ ಸ್ಥಿತಿಯಿಂದ ಬಳಲುತ್ತಿದ್ದಳು. ಇದರಿಂದ ವೈದ್ಯರು ರೋಗಿಯನ್ನು ಮತ್ತಷ್ಟು ವಿಶ್ಲೇಷಿಸಿ ನೋಡಿದಾಗ, ಶರೀರದಲ್ಲಿ ಪುರುಷ ಸ್ವರೂಪವಾದ ಲೈಂಗಿಕ ಬೆಳವಣಿಗೆಗಳು ಕಂಡು ಬಂದಿತ್ತಾದರೂ, ಪುರುಷರ ಗುಪ್ತಾಂಗ ಬೆಳೆದಿರಲಿಲ್ಲ.
ಕ್ಲಿಷ್ಟಕರ ಸಮಸ್ಯೆ ಏಕೆ?
ತಜ್ಞ ವೈದ್ಯ ಡಾ.ಮೋಹನ್ ಕೇಶವಮೂರ್ತಿ ಅವರ ಪ್ರಕಾರ ಪುರುಷರನ್ನು ಮಹಿಳೆಯಾಗಿ ಲಿಂಗ ಬದಲಾಯಿಸುವುದು ಸುಲಭ. ಆದರೆ, ಮಹಿಳೆಯನ್ನು ಪುರುಷರನ್ನಾಗಿ ಮಾಡುವ ಪ್ರಕ್ರಿಯೆ ತುಂಬಾ ಕ್ಲಿಷ್ಟಕರವಾದದ್ದು. ಅಲ್ಲದೇ ಈ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರೋಗಿಯು 46 ಎಕ್ಸ್‌ವೈ ಕ್ಯಾರೋಟೈಪ್ (ಹೆಣ್ಣಿನ ಲಕ್ಷಣದ ವೈದ್ಯಕೀಯ ಸ್ಥಿತಿ) ಹೊಂದಿದ್ದರು ಸಹ ಆಕೆಯ ಲೈಂಗಿಕ ಸ್ವರೂಪ ಆಂತರಿಕವಾಗಿ ಪುರುಷರಿಗಿದ್ದಂತೆ ಇತ್ತು. ಆದರೆ ಪರಿಪೂರ್ಣ ಬೆಳವಣಿಗೆ ಆಗಿರಿಲಿಲ್ಲ. ಗರ್ಭಾಶಯ ವಿಕಸನ ಸಂದರ್ಭದಲ್ಲಿ ಈ ಪರಿಸ್ಥಿತಿ ಉದ್ಭವಿಸಿತ್ತು. ಇದರ ಆಧಾರದ ಮೇರೆಗೆ ತಾವು ಲಿಂಗ ಬದಲಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ. 10 ಸೆಮೀ ಹೆಚ್ಚುವರಿ ನಳಿಕೆ ನಿರ್ಮಿಸುವ ಮೂಲಕ ಆಕೆಯ ಶರೀರದಲ್ಲಿ ಶಸ್ತ್ರಚಿಕಿತ್ಸೆ ಕಾರ್ಯವನ್ನು ಪ್ರಾರಂಭಿಸಿದರು. ಶರೀರವನ್ನು ಪುರುಷನನ್ನಾಗಿ ಮಾಡಲು ತಯಾರು ಆರಂಭಿಸಿದ್ದಾಗಿ ತಜ್ಞ ವೈದ್ಯರು ತಿಳಿಸಿದ್ದಾರೆ. ಈ ಪ್ರಕ್ರಿಯೆಯನ್ನು ಬಕ್ಕಲ್ ಮ್ಯೂಕೋಸಲ್ ಯೂರೆಥ್ರೋಪ್ಲ್ಯಾಸ್ಟಿ (Buccal mucosal urethroplasty) ಎಂದು ಕರೆಯುತ್ತಾರೆ.
ಇದಲ್ಲದೆ ಹೆಚ್ಚುವರಿಯಾಗಿ ರೂಡಿಮೆಂಟರಿ ಕಾರ್ಪೋರಾ ಅಂಗಾಂಶದಲ್ಲಿ ಮಾಲೆಬಲ್ ಪೆನೈಲ್ ಪ್ರೊಸ್ಥೆಸಿಸ್(Malleable penile prosthesis) ಅನ್ನು ಸೇರಿಸಿದ್ದಾರೆ. ಇದು ಪುರುಷರಲ್ಲಿರುವಂತೆ ಗುಪ್ತಾಂಗ ಉದ್ರೇಕಗೊಳಿಸುವುದಕ್ಕಾಗಿ ವೈದ್ಯಕೀಯ ಕ್ಷೇತ್ರ ಅರಿತು ಕೊಂಡಿರುವ ತಂತ್ರ. ಇದರಿಂದಾಗಿ ವ್ಯಕ್ತಿಯು ಪುರುಷನಂತೆ ತನ್ನ ಲೈಂಗಿಕ ಕಾರ್ಯವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಬಹುದಾಗಿದೆ. (ಪುರುಷರಲ್ಲಿ ಗುಪ್ತಾಂಗ ನಿಮಿರುವ ಸಮಸ್ಯೆ ಹೋಗಲಾಡಿಸುವುದಕ್ಕಾಗಿ ಮಾಲೆಬಲ್ ಪೆನೈಲ್ ಇಂಪ್ಲಾಂಟ್ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವಾಗಿದೆ).
ಕಾನೂನು ಬದ್ದ ಮಾನ್ಯತೆಗೆ ಈ ಪ್ರಕ್ರಿಯೆ ಅವಶ್ಯಕ:
ಮತ್ತೋರ್ವ ಡಾ.ಬಸವರಾಜ್ ನೀಲ್ಗರ್ ಅವರ ಪ್ರಕಾರ, ಮುಖ್ಯವಾಗಿ ತೃತೀಯ ಲಿಂಗದವರಿಗಾಗಿ ಸಾಮಾಜಿಕ ಮತ್ತು ಕಾನೂನು ಬದ್ಧ ಮಾನ್ಯತೆ ಪಡೆಯುವುದಕ್ಕಾಗಿ ಭಾರತದಲ್ಲಿ ಇತ್ತೀಚೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (ಜಿಆರ್ಎಸ್) ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಉತ್ತಮ ಜೀವನ ನಡೆಸುವುದಕ್ಕಾಗಿ ಯಾರೇ ವ್ಯಕ್ತಿ ಸೂಕ್ತವಾದ ಶಾರೀರಿಕ ವ್ಯವಸ್ಥೆ ಹೊಂದುವುದು ಹಾಗೂ ಇದಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಾಗುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಾಮುಖ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಕ್ಕಲ್ ಮ್ಯೂಕೋಸಲ್ ರಿಕನ್ಸ್ಟ್ರಕ್ಷನ್ ಎಂಬ ವಿಧಾನವನ್ನು ಯೂರೋಲಜಿಯಲ್ಲಿ ಅತ್ಯಂತ ಯಶಸ್ವಿ ತಂತ್ರ. ವೈದ್ಯಕೀಯವಾಗಿ ಲಿಂಗ ಪರಿವರ್ತನೆಯಾದ ರೋಗಿಯನ್ನು ಒಂದು ವಾರ ನಿಗಾದಲ್ಲಿರಿಸಿ ತದ ನಂತರ ಮನೆಗೆ ಕಳುಹಿಸುವುದಾಗಿ ವೈದ್ಯರು ತಿಳಿಸಿದ್ದಾರೆ.