ಬೆಂಗಳೂರು: ಹೊರವರ್ತುಲ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ನಿರ್ಮಾಣವಾಗುತ್ತಿರುವ ಮೆಟ್ರೋ ಪಿಲ್ಲರ್‌ಗಳ ಮೇಲೆ ವ್ಯಕ್ತಿಯೋರ್ವ ತ್ಯಾಜ್ಯ ತೈಲವನ್ನು ಸುರಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಾಮಗಾರಿಯ ಸಲುವಾಗಿ ನಮ್ಮ ಮೆಟ್ರೋ ಭೂಸ್ವಾಧೀನ ಪ್ರಕ್ರಿಯೆ ನಡೆಸಿದ ವೇಳೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಪರಿಹಾರವಾಗಿ 1 ಕೋಟಿ ಹಣವನ್ನು ನೀಡಲಾಗಿದೆ. ಆದರೆ ಭೂಮಿಯ ಹಕ್ಕು ಸಾಧಿಸುತ್ತಿರುವ ಮಾಲೀಕನೊಬ್ಬ ಪರಿಹಾರದ ಹಣ ನನಗೆ ಸೇರಬೇಕೆಂದು ಆಗ್ರಹಿಸಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್‌ಗಳ ಮೇಲೆ ತ್ಯಾಜ್ಯ ಸುರಿದಿರುವುದರಿಂದ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಈ ತ್ಯಾಜ್ಯದೊಂದಿಗೆ ಸುರಿಯಲಾಗಿರುವ ಎಣ್ಣೆಯಿಂದಾಗಿ ಬೆನ್ನಿಗಾನಹಳ್ಳಿ ಹಾಗೂ ಕೆ.ಆರ್ ಪುರ ನಡುವಿನ ಪಿಲ್ಲರ್‌ಗಳೂ ನಾಶವಾಗುವ ಭಯದಿಂದ ನಿರ್ಮಾಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಫಯಾಜ್ ಈ ಹಿಂದೆ ಕೂಡ ಮೆಟ್ರೋ ಕಾಮಗಾರಿಗೆ ಅಡ್ಡಿಯುಂಟು ಮಾಡಿದ್ದರು. ಬಳಿಕ ನಮ್ಮ ಮೆಟ್ರೋ ಇವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಕೆಲ ದಿನಗಳ ನಂತರ ಕಾಮಗಾರಿ ಕೆಲಸ ಮರಳಿ ಆರಂಭವಾಗಿತ್ತು. ಫಯಾಜ್ ಅವರು ಭೂಮಿ ಮಾಲೀಕತ್ವ ಪಡೆದುಕೊಳ್ಳುವ ವಿಚಾರದ ಸಂಬಂಧ ಇನ್ನೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ನ್ಯಾಯಾಲಯ ಕಾಮಗಾರಿಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ. ಭೂಮಿಗೆ ಪರಿಹಾರವಾಗಿ 1 ಕೋಟಿ ರೂಪಾಯಿ ಈಗಾಗಲೇ ನೀಡಲಾಗಿದೆ ಈ ವ್ಯಕ್ತಿ ಪರಿಹಾರ ಹಣಕ್ಕಾಗಿ ಆಗ್ರಹಿಸಿ ನಮ್ಮ ಕೆಲಸಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದಲ್ಲದೆ, ಫಯಾಜ್ ನಾಲ್ಕು ಪಿಲ್ಲರ್‌ಗಳ ಮೇಲೆ ನ್ಯಾಯಾಲಯದ ಪ್ರಕರಣಗಳ ಸಂಖ್ಯೆಯನ್ನೂ ಕೂಡ ಈ ಹಿಂದೆ ಬರೆದಿದ್ದರು. ರಾತ್ರಿ ವೇಳೆ ತನ್ನ ಸಹಚರರೊಂದಿಗೆ ಸ್ಥಳಕ್ಕೆ ಬರುವ ಫಯಾಜ್, ಕಾಮಗಾರಿ ಕೆಲಸ ಮಾಡುವ ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲ್ಲಿನ ಉಸ್ತುವಾರಿ ವಹಿಸಿರುವ ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಭೂ ಸ್ವಾಧೀನ ಜನರಲ್ ಮ್ಯಾನೇಜರ್ ಎಂ.ಎಸ್. ಚನ್ನಪ್ಪ ಗೌಡರ್ ಈ ಕುರಿತು ಮಾತನಾಡಿ, 'ಟಿನ್ ಫ್ಯಾಕ್ಟರಿಯಿಂದ ಸರಿಸುಮಾರು 200 ಮೀಟರ್ ದೂರದ 3762 ಚ.ಮೀ. ಭೂಮಿ ತನ್ನದೆಂದು ಸೈಯದ್ ಫಯಾಜ್ ಹಕ್ಕು ಸಾಧಿಸುತ್ತಿದ್ದಾನೆ. ಈ ಭೂಮಿಯನ್ನು ಕಾಮಗಾರಿಯ ಸಲುವಾಗಿ ನಮ್ಮ ಮೆಟ್ರೊ ಸ್ವಾಧೀನಪಡಿಸಿಕೊಂಡಿದೆ. 5 ಎಕರೆಯ ಜಾಗದಲ್ಲಿ 1 ಎಕರೆ 20 ಗುಂಟೆ ಮಾತ್ರ ಸ್ವಾಧೀನಪಡಿಸಿಕೊಂಡಿದ್ದು, ಸೈಯದ್ ಅವರು ಹಿಂದಿನ ಮಾಲೀಕರಿಂದ ಭೂಮಿ ಖರೀದಿಸಿದ್ದೇನೆ, ನಿಜವಾದ ಮಾಲೀಕ ನಾನು. ಪರಿಹಾರದ ಹಣ ನನಗೆ ಮಾತ್ರ ಸಿಗಬೇಕು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಡಿಎ ನಿರ್ಮಾಣದ ಶಿವರಾಮ ಕಾರಂತ ಬಡಾವಣೆ ಸೈಟ್ ದರ ನಿಗದಿ: ಸರ್ಕಾರದ ಅನುಮೋದನೆ ಬಾಕಿ