ಬೆಂಗಳೂರು: ಸರ್ಕಾರದ ಅದೆಷ್ಟೋ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ. ಯೋಜನೆಗಳ ಕುರಿತು ಮಾಹಿತಿ ಕೊರತೆಯಿಂದ ಹಲವರಿಗೆ ತಲುಪುವುದೇ ಇಲ್ಲ. ಇನ್ನೂ ಕೆಲವರಿಗೆ ಮಾಹಿತಿ ಇದ್ದರೂ ಪಡೆಯಲು ಸಾಧ್ಯವಾಗುವುದಿಲ್ಲ. ಸಣ್ಣ ಹಾಗೂ ಅತಿ ಸಣ್ಣ ರೈತರು ಉಚಿತವಾಗಿ ಕೊಳವೆ ಬಾವಿ ಅಥವಾ ತೆರೆದ ಬಾವಿ ನಿರ್ಮಿಸಿ ಒಳ್ಳೆಯದಾಗಬಹುದಾದ ಗಂಗಾ ಕಲ್ಯಾಣ ನೀರಾವಾರಿ ಯೋಜನೆಯಿಂದ ಏನೆಲ್ಲಾ ಉಪಯೋಗ ಇದೆ, ಅದನ್ನು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಇದೆ.
ಬೋರ್ ವೆಲ್ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ - ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶವಾಗಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರು ಉಚಿತವಾಗಿ ಕೊಳವೆ ಬಾವಿ, ತೆರೆದ ಬಾವಿ ನಿರ್ಮಾಣಕ್ಕೆ ಈ ಯೋಜನೆಯಡಿ ಧನಸಹಾಯ ಪಡೆಯಬಹುದಾಗಿದೆ. ಹೀಗೆ ನೆರವಾಗುವ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗಲಿದೆ.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2023-24 ನೇ ಸಾಲಿನ ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ಹೊಸ ಅರ್ಜಿಗಳು ಪ್ರಾರಂಭವಾಗಿದ್ದು, ಆಸಕ್ತ ರೈತರು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹತೆಗಳೇನು?: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಒಳಪಡುವ ಜಾತಿ ಸಮುದಾಯಗಳ
ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಹಾಲಿ ಜಮೀನುಗಳು ಮುಷ್ಠಿಯಾಗಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98,000 ರೂ. ಹಾಗೂ ಪಟ್ಟಣ ಪ್ರದೇಶದವರಿಗೆ 1,20,000 ರೂ. ಗಳ ಒಳಗಿರಬೇಕು. ಅರ್ಜಿದಾರರು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.
ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ವೈಯಕ್ತಿಕ ಕೊಳವೆ ಬಾವಿ ಯೋಜನೆಯಲ್ಲಿ ಘಟಕ ವೆಚ್ಚ ರೂ. 2.50 ಲಕ್ಷಗಳು, ಇದರಲ್ಲಿ 2 ಲಕ್ಷ ರೂ. ಸಹಾಯಧನ ಹಾಗೂ 50,000 ರೂ. ನಿಗಮದಿಂದ ಶೇ.4ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತವಾಗಿರುತ್ತದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚ ರೂ. 4 ಲಕ್ಷಗಳು ಇದರಲ್ಲಿ ರೂ. 3.50ಲಕ್ಷ ಸಹಾಯಧನ ಹಾಗೂ 50,000 ರೂ. ನಿಗಮದಿಂದ ಶೇ.4ರ ಬಡ್ಡಿದರದಲ್ಲಿ ನೀಡುವ ಸಾಲದ ಮೊತ್ತವಾಗಿರುತ್ತದೆ. ರೈತರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್‌ನಲ್ಲಿರುವಂತೆ ರೈತರ ಹೆಸರು ಬ್ಯಾಂಕ್ ಖಾತೆಯ ಪ್ರಸ್ತಕದಲ್ಲಿಯೂ ಇದ್ದು, ಇತರ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿಯೂ ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ಹೊಂದಾಣಿಕೆಯಾಗಿರಬೇಕು.
ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಈಗಾಗಲೇ 2022-23ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಹಾಗೂ ಅರ್ಹ ರೈತರು ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಒನ್ ಕರ್ನಾಟಕ ಒನ್, ಹಾಗೂ ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಬಹುದು. ನಿಗಮದ ವೆಬ್‌ಸೈಟ್ www.dbcdc.karnataka.gov.in ಇಲ್ಲಿ ಸಂಪರ್ಕಿಸಬಹುದು.
ಯಾವ್ಯಾವ ನಿಗಮಗಳಿಂದ ಅರ್ಜಿ ಸಲ್ಲಿಸಬಹುದು: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ - ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಬೋವಿ ಸಮುದಾಯದ ಅಭಿವೃದ್ಧಿ ನಿಗಮ.
ಜಿಲ್ಲಾ ವ್ಯವಸ್ಥಾಪಕರು ಜಾಹೀರಾತು ನೀಡಿ ಆನ್‌ಲೈನ್ ಮೂಲಕ ಪ್ರತಿ ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸುತ್ತಾರೆ. ದಾಖಲಾತಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ವರ್ಗಾಯಿಸುತ್ತಾರೆ. ನಂತರ ಸಮಿತಿಯು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಕಳುಹಿಸುತ್ತದೆ. ಈ ಸಂಬಂಧ ಗಂಗಾ ಕಲ್ಯಾಣ ಯೋಜನೆಯ ವಿವರಗಳನ್ನು https://kmvstdcl.karnataka.gov.in/info-2/Ganga+Kalyana+ Scheme/en ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಹೆಚ್ಚಿನ ಮಾಹಿತಿಗಾಗಿ ಅರ್ಹರು 08022864720ಕ್ಕೆ ಸಂಪರ್ಕಿಸಬಹುದು.
ಇದನ್ನೂ ಓದಿ: ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ 'ರೈತ ಶಕ್ತಿ ಯೋಜನೆ' ಜಾರಿ: ರೈತರಿಗೆ ಸಿಗಲಿದೆ ಡೀಸೆಲ್ ಸಹಾಯಧನ