ಬೆಂಗಳೂರು: ಬಾಂಗ್ಲಾದೇಶದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸರಿಂದ ಗುಂಡು ತಿಂದಿರುವ ರಿದಯ್ ಬಾಬು ಬಾಂಗ್ಲಾದೇಶದಲ್ಲಿ ಟಿಕ್ಟಿಕ್ ವಿಡಿಯೋ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾನೆ.
ಟಿಕ್ಟಾಕ್ ಮೂಲಕ ಜನಪ್ರಿಯತೆ ಗಳಿಸಿದ್ದ ಆರೋಪಿ ಯುವತಿಯರನ್ನು ಸೆಳೆದು ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. 23 ವರ್ಷದ ಯುವತಿ ಮೇಲೆ ಆತ್ಯಾಚಾರ ಪ್ರಕರಣದಲ್ಲಿ ಇಬ್ಬರು ಯುವತಿಯರು ಸೇರಿದಂತೆ 6 ಮಂದಿ ಆರೋಪಿಗಳನ್ನು ನಗರ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದರು.
ಸ್ಥಳ ಮಹಜರಿಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಮುಂದಾದ ರಿದಯ್ ಬಾಬು ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಟಿಕ್ಟಾಕ್ ವಿಡಿಯೋ ಮಾಡಿ ಜನಪ್ರಿಯತೆ ಗಳಿಸಿದ್ದ ಎಂಬ ವಿಚಾರ ತಿಳಿದುಬಂದಿದೆ.
ಯುವತಿಯರನ್ನು ಟಿಕ್ಟಾಕ್ ಮೂಲಕ ಸೆಳೆದು ಬ್ಯೂಟಿಪಾರ್ಲರ್ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತಕ್ಕೆ ಅಕ್ರಮವಾಗಿ ಕರೆ ತರುತ್ತಿದ್ದ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳುಹಿಸಿ ಬ್ಯೂಟಿಪಾರ್ಲರ್ಗಳಲ್ಲಿ ಕೆಲಸ ಕೊಡಿಸುತ್ತಿದ್ದ. ಅನಂತರ ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದ. ಬಾಂಗ್ಲಾದೇಶದಿಂದ ಯುವತಿಯರನ್ನು ಕರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗ್ತಿದೆ.
ಚಾರ್ಜ್ ಶೀಟ್ ಸಲ್ಲಿಕೆ
ಪ್ರಕರಣ ಸಂಬಂಧ ಲೈಂಗಿಕ ದೌರ್ಜನ್ಯ, ಹಲ್ಲೆ ಹಾಗೂ ಆತ್ಯಾಚಾರ ಬಗ್ಗೆ ಪೊಲೀಸರು ಸಂತ್ರಸ್ತೆಯಿಂದ 6 ಪುಟಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ವರದಿ ಇಂದು ಬರುವ ಸಾಧ್ಯತೆಯಿದ್ದು, ಬಂದ ಬಳಿಕ ನ್ಯಾಯಾಲಯಕ್ಕೆ ವರದಿ ನೀಡಲು ಸಿದ್ಧತೆ ನಡೆಸಿದ್ದಾರೆ.
ಹೀಗಾಗಿ ಇನ್ನೊಂದು ತಿಂಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದ ತಂಡ ಮುಂದಾಗಿದೆ. ಈಗಾಗಲೇ ಸಂಪೂರ್ಣ ತನಿಖೆಗಾಗಿ ನಾಲ್ವರು ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಎಸಿಪಿಯಿರುವ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಇದನ್ನೂ ಓದಿ: ಮಾಸ್ಕ್ ವಿಚಾರಕ್ಕೆ ಯುವತಿ ಮೇಲೆ ಹಲ್ಲೆ.. ಬೀದಿ ರಂಪ ಮಾಡಿ ಪೊಲೀಸರ ಅತಿಥಿಯಾದ ಯುವತಿ