ಬೆಂಗಳೂರು: ರಾಜ್ಯದೆಲ್ಲೆಡೆ 151ನೇ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ. ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಗಾಂಧೀಜಿ ಅವರ ಹೋರಾಟ ಹಾಗೂ ಅವರ ಸಿದ್ಧಾಂತಗಳು ತಮ್ಮದೇ ಆದ ಪ್ರಭಾವ ಬೀರಿದ್ದವು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಇನ್ನು ಗಾಂಧಿ ಜನ್ಮ ದಿನದಂದು ಅವರ ಸ್ಮರಿಸಿ ಹಲವೆಡೆ ಪುಷ್ಪಾರ್ಚನೆ ನೆರವೇರಿಸಿ ನಮನ ಸಲ್ಲಿಸಲಾಗಿದೆ.
ರಾಯಚೂರಿನಲ್ಲಿ ಸರಳವಾಗಿ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆಯ ಹಿನ್ನೆಲೆ ಸರಳವಾಗಿ ಆಚರಿಸಲಾಗಿದೆ. ಗಾಂಧಿ ಪುತ್ಥಳಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಗೂ ಇತರರು ಪುಷ್ಪ ನಮನ ಸಲ್ಲಿಸಿ ಸ್ಮರಿಸಿದರು.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇನ್ನು ವಿಜಯಪುರದಲ್ಲಿ ನಗರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದ ಪ್ರತಿಮೆಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹುಬ್ಬಳ್ಳಿಯಲ್ಲಿ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ನಗರದ ಅಮರಗೋಳದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಧಾರವಾಡ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ್ ಹಾಗೂ ಗ್ರಾಮದ ಹಿರಿಯರು ಗ್ರಾಮವನ್ನು ಸ್ವಚ್ಛ ಮಾಡುವುದರ ಮೂಲಕ ವಿಶೇಷವಾಗಿ ಆಚರಿಸಿದರು.
ಚನ್ನರಾಯಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಜಯಂತಿ ಆಚರಿಸಲಾಗಿದೆ. ಶಾಸಕ ಸಿ.ಎನ್.ಬಾಲಕೃಷ್ಣ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಗಾಂಧಿಯವರ ತತ್ವ, ಆದರ್ಶಗಳ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಇನ್ನು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಹಾವೇರಿ ಜಿಲ್ಲಾದ್ಯಂತ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿ ಆಚರಿಸಲಾಯಿತು. ಜಿಲ್ಲಾಡಳಿತ ನಗರದ ಮಹಾತ್ಮಾ ಗಾಂಧೀಜಿ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಜಯಂತಿ ಆಚರಿಸಿತು. ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಸರ್ವಧರ್ಮಗಳ ಸಂದೇಶಗಳನ್ನು ಪಠಣ ಮಾಡಲಾಯಿತು.
ಹಾವೇರಿಯ ಹಾನಗಲ್ನಲ್ಲಿ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನದ ನಿಮಿತ್ತ ಇಂದು ತಾಲೂಕು ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಸಿ ಮಾದರಿ ಜಯಂತಿಯನ್ನಾಗಿ ಆಚರಿಸಲಾಯಿತು.
ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಸಭೆ ಹಾಗೂ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಆರ್.ಗಿರೀಶ್ ಕಾರ್ಯಕ್ರಮ ಉದ್ಘಾಟಿಸಿ, ದೇಶದ ಇಬ್ಬರೂ ಮಹಾನ್ ವ್ಯಕ್ತಿಗಳಿಗೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿದರು.
ಇನ್ನು ಬೆಳಗಾವಿಯ ಅಥಣಿಯಲ್ಲಿ ಗಾಂಧಿ ಜಯಂತಿ ನಿಮಿತ್ತ ಜೆಇ ಶಿಕ್ಷಣ ಸಂಸ್ಥೆಯ ಶಿಕ್ಷಕರು ಗಾಂಧೀಜಿಯವರ ಸ್ವಚ್ಛ್ ಭಾರತ ಕನಸಿನ ಯೋಜನೆಯಡಿಯಲ್ಲಿ ಶಾಲೆ ಆವರಣದಲ್ಲಿ ಕಸಗುಡಿಸುವ ಮೂಲಕ ಜಯಂತಿ ಆಚರಿಸಲಾಯಿತು.