ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟ್ಯಂತರ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಗಗನ್ ಹೈಡ್ರಾಮ ಬಯಲಾಗಿದೆ. ಪ್ರಕರಣದ ಆರೋಪಿಯಾಗಿ ಬಂಧಿತರಾಗಿರುವ ಚೈತ್ರಾ ಕುಂದಾಪುರ, ಗಗನ್ ಕಡೂರು ಹಾಗೂ ಶ್ರೀಕಾಂತ್ ಎಂಬವರನ್ನು ಹಣದ ವಿಚಾರವಾಗಿ ಕಳೆದ ಏಪ್ರಿಲ್ 24ರಂದು ದೂರುದಾರ ಗೋವಿಂದ ಬಾಬು ಅವರು ಕಚೇರಿಗೆ ಕರೆಯಿಸಿಕೊಂಡಿದ್ದರು. ಈ ವೇಳೆ ಆರೋಪಿ ಗಗನ್ ಕಡೂರು ವಿಷ ಕುಡಿದು ಹೈಡ್ರಾಮ ಸೃಷ್ಟಿ ಮಾಡಿದ್ದಾನೆ. ವಿಷ ಸೇವನೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದೇ ದೃಶ್ಯಾವಳಿಯನ್ನ ಸಿಸಿಬಿ ತನಿಖಾಧಿಕಾರಿಗಳಿಗೆ ಗೋವಿಂದ ಬಾಬು ನೀಡಿರುವುದು ತಿಳಿದುಬಂದಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೈಂದೂರು ವಿಧಾನಸಭಾಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಪೂಜಾರಿಯಿಂದ ಕೋಟ್ಯಂತರ ಹಣ ಪಡೆದು ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಸೇರಿದಂತೆ ಇನ್ನಿತರ ಆರೋಪಿಗಳು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ವಂಚನೆ ಜಾಲ ತಿಳಿಯುತ್ತಿದ್ದಂತೆ ಹಣ ವಾಪಸ್ ನೀಡುವಂತೆ ತಾಕೀತು ಮಾಡಿದ್ದ ಪೂಜಾರಿ ಈ ಸಂಬಂಧ ಕಳೆದ ತನ್ನ ಕಚೇರಿಗೆ ಕರೆಯಿಸಿಕೊಂಡಿದ್ದರು. ಈ ವೇಳೆ ಹಣ ವಾಪಸ್ ನೀಡುವಂತೆ ಪೂಜಾರಿ ಕೇಳಿದ್ದಾರೆ. ಈ ಬಗ್ಗೆ ಮಾತುಕತೆ ಆಗುತ್ತಿದ್ದಂತೆ ಗಗನ್, ನಾನು ಸಾಯಲು ಬಂದಿದ್ದೇನೆ ಎಂದು ಹೇಳಿ ಬ್ಯಾಗ್‌ನಲ್ಲಿ ವಿಷವಿದೆ ಎನ್ನಲಾದ ಬಾಟಲ್ ತೆಗೆದು ಕುಡಿಯುವ ಪ್ರಯತ್ನ ಮಾಡಿದ್ದಾನೆ. ಪಕ್ಕದಲ್ಲೇ ಕುಳಿತುಕೊಂಡಿದ್ದ ಚೈತ್ರಾ ಕುಂದಾಪುರ ಹಾಗೂ ಇನ್ನಿತರರು ಆತನನ್ನು ತಡೆದಿದ್ದಾರೆ.
ವಂಚನೆಗೊಳಗಾಗಿರುವ ಪೂಜಾರಿ ನಿನ್ನೆ ಸಿಸಿಬಿ ಕಚೇರಿ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪೂಜಾರಿ, ಸಿಸಿಬಿಯವರು ಏನೆಲ್ಲಾ ಕೇಳಿದ್ದಾರೆ ಅದನ್ನೆಲ್ಲಾ ಕೊಟ್ಟಿದ್ದೇನೆ. ಪೆನ್ಡ್ರೈವ್ ನಲ್ಲಿ ದಾಖಲೆಗಳನ್ನ ಕೊಟ್ಟಿದ್ದೇನೆ. ವಿಚಾರಣೆ ಹಂತದಲ್ಲಿದೆ. ಹಾಗಾಗಿ ನಾನು ಹೇಳುವುದಕ್ಕೆ ಬರಲ್ಲ. ಆಗಲೇ ದೂರು ಕೊಡಲು ಹಣ ವಾಪಸ್ ಕೊಡಲು ಸಮಯ ತೆಗೆದುಕೊಂಡಿದ್ದರು. ನಂತರ ಹಣ ಕೊಡಲಿಲ್ಲ, ಹೀಗಾಗಿ ತಡವಾಗಿ ದೂರು ನೀಡಿದ್ದೇನೆ ಎಂದಿದ್ದರು.
ಇದನ್ನೂ ಓದಿ: ವಂಚನೆ ಆರೋಪ ಪ್ರಕರಣ: 'ಸ್ವಾಮೀಜಿ ಬಂಧನವಾಗಲಿ, ಸತ್ಯ ತಿಳಿಯಲಿದೆ' ಎಂದ ಚೈತ್ರಾ ಕುಂದಾಪುರ