ಬೆಂಗಳೂರು: 'ದಳಪತಿ'ಗಳ ಸಂಧಾನ ಯಶಸ್ವಿಯಾದ ಕಾರಣ ಸುಮಾರು ಮೂರು ವರ್ಷಗಳ ನಂತರ ಮಾಜಿ ಸಚಿವ, ಹಿರಿಯ ಮುಖಂಡ ಜಿ ಟಿ ದೇವೇಗೌಡ ಅವರಿಂದು ಪಕ್ಷದ ರಾಜ್ಯ ಕಚೇರಿ ಜೆಪಿ ಭವನಕ್ಕೆ ಭೇಟಿ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನದ ನಂತರ ಕುಮಾರಸ್ವಾಮಿ ಜತೆ ಮುನಿಸಿಕೊಂಡು ದೂರವೇ ಉಳಿದಿದ್ದ ಜಿಟಿಡಿ, ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸಿ ದೀಪಾವಳಿ ಶುಭಾಶಯ ಕೋರಿದರು. ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಪ್ರಸಕ್ತ ರಾಜಕಾರಣ, ಪಂಚರತ್ನ ರಥಯಾತ್ರೆ ಬಗ್ಗೆ ಚರ್ಚಿಸಿದರು.
ಈ ಮೂಲಕ ಕುಮಾರಸ್ವಾಮಿ ಹಾಗೂ ಜಿಟಿಡಿ ನಡುವಿದ್ದ ವೈಮನಸ್ಸು ಕೊನೆಗೊಂಡಂತಾಗಿದೆ. ಸುದ್ದಿಗಾರರ ಜೊತೆ ಮಾತನಾಡಿದ ಜಿಟಿಡಿ, ಮರಳಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದು ಖುಷಿ ತಂದಿದೆ. ರಾಜ್ಯದಲ್ಲಿ ಭಾರಿ ಮಳೆಯಿಂದ ರಸ್ತೆಗಳು, ನಾಲೆಗಳು ಹಾಳಾಗಿವೆ. ಸಿಎಂಗೆ ಅವೆಲ್ಲವನ್ನೂ ಸರಿಪಡಿಸುವ ಶಕ್ತಿಯನ್ನು ಚಾಮುಂಡೇಶ್ವರಿ ನೀಡಲಿ. ನಿನ್ನೆ ಸಾಯಂಕಾಲದವರೆಗೂ ಸೂರ್ಯಗ್ರಹಣ ಇತ್ತು. ನಾಡಿಗೆ ಒಳ್ಳೆಯದಾಗಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೂ ಭೇಟಿ ನೀಡಿ ಸಿಹಿ ತಿನ್ನಿಸಿದ್ದೇನೆ ಎಂದು ಹೇಳಿದರು.
ದೇವೇಗೌಡರಿಗೆ ಶುಭ ಕೋರಿದ ಜಿಟಿಡಿ: ಪದ್ಮನಾಭನಗರದ ಗೌಡರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ, ಮಾಜಿ ಪ್ರಧಾನಿ ದೇವೇಗೌಡರಿಗೆ ಸಿಹಿ ತಿನ್ನಿಸಿ ಹಬ್ಬದ ಶುಭಾಶಯ ಕೋರಿದರು. ಸ್ವಲ್ಪ ಹೊತ್ತು ನಿವಾಸದಲ್ಲೇ ಇದ್ದ ಜಿಟಿಡಿ, ರಾಜಕಾರಣದ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ದೇವೇಗೌಡರ ಮನೆಯಲ್ಲಿ ದೀಪಾವಳಿ ಗೋ ಪೂಜೆ ಸಂಭ್ರಮ