ಬೆಂಗಳೂರು: "ಅಕ್ಟೋಬರ್ 21ರಂದು ನಡೆಯುವ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ" ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ನೀಡಿದ ಸ್ಪಷ್ಟನೆ ಅನರ್ಹ ಶಾಸಕರ ನಿದ್ದೆಗೆಡಿಸಿದೆ.
ಚುನಾವಣೆಗೆ ನಿಲ್ಲಲು ಸಾಧ್ಯವಾಗದಿದ್ದರೆ ತಮ್ಮ ರಾಜಕೀಯ ಭವಿಷ್ಯವೇ ಮುಗಿದು ಹೋಯಿತೇ ಎನ್ನುವ ಆತಂಕ ಅನರ್ಹ ಶಾಸಕರನ್ನು ಕಾಡತೊಡಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಅಳಲನ್ನು ತೋಡಿಕೊಂಡಿದ್ದು, ಸಮಸ್ಯೆಗೆ ಕಾನೂನಿನ ಪರಿಹಾರ ಹುಡುಕಲು ಸ್ವತಃ ಸಿಎಂ ಯಡಿಯೂರಪ್ಪನವರೇ ತುರ್ತಾಗಿ ದೆಹಲಿಗೆ ತೆರಳಿದ್ದಾರೆ.
ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ನೀಡಿದ್ದ ತೀರ್ಪಿನ ಪ್ರಕಾರ ಅನರ್ಹ ಶಾಸಕರು ಪ್ರಸ್ತುತ ವಿಧಾನಸಭೆ ಚುನಾವಣೆ ಅವಧಿ ಮುಗಿಯುವ ತನಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಆದರೆ ಚುನಾವಣೆ ಆಯೋಗದ ನಿಯಮಾವಳಿ ಪ್ರಕಾರ ಚುನಾವಣೆಗೆ ಸ್ಪರ್ಧಿಸಬಹುದೆಂದು ಅನರ್ಹ ಶಾಸಕರು ಭಾವಿಸಿದ್ದರು. ಬೇರೆ ರಾಜ್ಯಗಳಲ್ಲಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಿದ ಉದಾಹರಣೆಗಳ ಕುರಿತು ಮಾಹಿತಿ ಸಹ ಸಂಗ್ರಹ ಮಾಡಿದ್ದರು.
ಉಪ ಚುನಾವಣೆ ಬಗ್ಗೆ ವಿವರ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಅನರ್ಹ ಶಾಸಕರು ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮುಖ್ಯ ಚುನಾವಣಾಧಿಕಾರಿಗಳ ಈ ಮಾತು ಅನರ್ಹ ಶಾಸಕರ ನಿದ್ದೆಗೆಡಿಸಿದೆ. ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಗದಿದ್ದರೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಅನರ್ಹ ಶಾಸಕರಲ್ಲಿ ಆತಂಕ ಮನೆ ಮಾಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಅನರ್ಹ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಸಿಎಂ ಅವರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಉಪ ಚುನಾವಣೆಯಲ್ಲಿಅನರ್ಹ ಶಾಸಕರು ಸ್ಪರ್ಧೆ ಮಾಡಲು ಅವಕಾಶ ಸಿಗದಿದ್ದರೆ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲುವುದು ಸಹ ಕಷ್ಟವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.