ಬೆಂಗಳೂರು: ಸ್ನೇಹಿತರ ನಡುವೆ 50 ರೂಪಾಯಿಗಾಗಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾದ ಘಟನೆ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಸರ್ಕಲ್ ಬಳಿ ಮಂಗಳವಾರ ರಾತ್ರಿ ನಡೆದಿದೆ. 24 ವರ್ಷದ ಶಿವಮಾಧು ಕೊಲೆಯಾದ ಯುವಕ. ಈತನ ಸ್ನೇಹಿತ ಶಾಂತಕುಮಾರ್ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆಯಾದ ಶಿವಮಾಧು ಮತ್ತು ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದವರು. ಇದೇ ಕುರುಬರಹಳ್ಳಿ ಸರ್ಕಲ್ ಬಳಿಯಿಂದ ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಸಮೀಪ ಶಿಫ್ಟ್ ಆಗಿದ್ದರು. ಆದರೂ ಹಳೆ ಅಡ್ಡಾಗೆ ಆಗಾಗ ಬರುತ್ತಿದ್ದರು. ಆರೋಪಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾಧು ಆಟೋ ಚಾಲಕನಾಗಿದ್ದ.
ಎಂದಿನಂತೆ ಮಂಗಳವಾರ ಕುರುಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಹತ್ತಿರದ ಮೈದಾನವೊಂದರಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾರೆ. ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆಂದು ರಾತ್ರಿ 8.30ರ ಸುಮಾರಿಗೆ ಸರ್ಕಲ್ ಬಳಿಯಿರುವ ಸೈಬರ್ ಸೆಂಟರ್ವೊಂದಕ್ಕೆ ಹೋಗಿದ್ದರು.
ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂಪಾಯಿ ತೆಗೆದುಕೊಂಡಿದ್ದಾನೆ. ಆಗ ಯಾಕೆ ತೆಗೆದುಕೊಂಡೆ, ಅದನ್ನು ಕೊಡು ಅಂತಾ ಕೇಳಿದ್ದ ಶಾಂತಕುಮಾರ್ಗೆ ಕೊಡಲ್ಲ ಏನಿವಾಗ ಎಂದು ಶಿವಮಾಧು ಸ್ನೇಹದ ಸಲುಗೆಯಲ್ಲೇ ಹೇಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೊತೆಯಲ್ಲೇ ತಂದಿದ್ದ ಚಾಕು ತೆಗೆದುಕೊಂಡು ಆರೋಪಿ ಶಾಂತಕುಮಾರ್, ಶಿವಮಾಧು ಎದೆಗೆ ಚುಚ್ಚಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಆತ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ತೆರಳಿ ಪರಿಶಿಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಎರಡನೆ ಹೆಂಡತಿಗೆ ವಿಚ್ಛೇದನ ಕೊಡಿಸಿದ್ದಕ್ಕೆ ದ್ವೇಷ.. ಸಿಟ್ಟಿಗೆದ್ದ ವ್ಯಕ್ತಿ ಪಂಚಾಯಿತಿ ಮಾಡಿದವನನ್ನೇ ಕೊಚ್ಚಿ ಕೊಂದ!