ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ನಲ್ಲಿ ಫ್ರೀ ಕಾಶ್ಮೀರ ಎಂದು ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಚರ್ಚ್ ಸ್ಟ್ರೀಟ್ನ ಗೋಡೆಗಳ ಮೇಲೆ ರಾತ್ರೋರಾತ್ರಿ ಫ್ರೀ ಕಾಶ್ಮೀರ, ನಾನು ಯಾವುದೇ ದಾಖಲೆ ತೋರಿಸುವುದಿಲ್ಲ ಎಂಬ ಬರಹಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಗೋಡೆ ಬರಹ ಬರೆದವರೂ ಮಾತ್ರ ಪತ್ತೆಯಾಗಿಲ್ಲ.
ಈ ಕುರಿತು ಕೇಂದ್ರ ವಿಭಾಗ ಡಿಸಿಪಿ, ಚೇತನ್ ಸಿಂಗ್ ರಾಥೋರ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಸುವ ಉದ್ದೇಶದಿಂದ ಕೆಲವರು ಈ ಕೃತ್ಯವೆಸಗಿದ್ದಾರೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ನಾವೇ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಆದರೆ, ಆರೋಪಿಗಳು ಈವರೆಗೂ ಪತ್ತೆಯಾಗಿಲ್ಲ ಎಂದರು.