ಬೆಂಗಳೂರು: 'ಊಟ ಇಲ್ಲದೇ, ತಿಂಡಿ ಇಲ್ಲದೇ ಒದ್ದಾಡ್ತಿದ್ವಿ. ಈಗ ಊಟ ಸಿಕ್ಕಿದೆ. ತುಂಬಾ ಸಂತೋಷ ಆಯ್ತು. ಕೂಲಿ ಕೆಲಸ ಮಾಡ್ತಿದ್ವಿ. ಈಗ ಅದೂ ಸಿಕ್ತಿಲ್ಲ. ನನ್ನಂತ ಎಷ್ಟೋ ಜನ ಬಡಪಾಯಿಗಳು ಫುಟ್ಪಾತ್ ಮೇಲೆ ಮಲಗೋರು, ಕೂಲಿ ಕಾರ್ಮಿಕರಿಗೆ ಒಳ್ಳೇದಾಗಿದೆ' ಎಂದು ಹಸಿವು ನೀಗಿಸಿಕೊಂಡವರು ಹೇಳಿದ್ದಾರೆ.
ಹೌದು, ಹೈಕೋರ್ಟ್ ಆದೇಶದಂತೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ಕೊಡಲು ರಾಜ್ಯ ಸರ್ಕಾರ ಆದೇಶಿಸಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಹಲವರ ಹೊಟ್ಟೆ ತುಂಬಿಸುತ್ತಿದೆ. ಸಾಕಷ್ಟು ಜನ ಕೊಳೆಗೇರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು, ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದವರು, ವಲಸೆ ಕಾರ್ಮಿಕರು ಈ ಲಾಕ್ಡೌನ್ ಸಮಯದಲ್ಲಿ ಕೆಲಸವೂ ಇಲ್ಲದೆ, ಊಟವೂ ಇಲ್ಲದೆ ಪರದಾಡಬೇಕಿತ್ತು. ಆದರೆ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ತಿಂಡಿ, ಊಟ ಹಂಚಲು ಆರಂಭಿಸಿದ್ದರಿಂದ ಹಸಿವು ನೀಗಿಸಿಕೊಳ್ಳಬಹುದಾಗಿದೆ.
ಊಟ ಇಲ್ಲದೇ, ತಿಂಡಿ ಇಲ್ಲದೇ ಒದ್ದಾಡ್ತಿದ್ವಿ. ಈಗ ಊಟ ಸಿಕ್ಕಿದೆ ಎಂದು ಮರಿಯಪ್ಪನಪಾಳ್ಯ ಇಂದಿರಾ ಕ್ಯಾಂಟೀನ್ನಲ್ಲಿ ತಿಂಡಿ ತಿಂದ ನರಸಿಂಹಮೂರ್ತಿ ತುಂಬಿದ ಕಣ್ಣುಗಳಿಂದ ಅಭಿಪ್ರಾಯ ತಿಳಿಸಿದರು.
ಪ್ರತೀ ಇಂದಿರಾ ಕ್ಯಾಂಟೀನ್ನಲ್ಲಿ ಮೂರು ಹೊತ್ತೂ 500 ಜನರಿಗೆ ಊಟ ನೀಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ 7-30ರಿಂದ 10ರವರೆಗೆ ಉಪಹಾರ, ಮಧ್ಯಾಹ್ನ 12-30 ರಿಂದ 3-30 ರವರೆಗೆ, ರಾತ್ರಿ 6-30ರಿಂದ 8-30ರವರೆಗೆ ಊಟ ಇರಲಿದೆ.
ಉಚಿತ ಊಟದ ಮಾಹಿತಿ ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಹಾಗಾಗಿ ಜನ ಕಡಿಮೆ ಇದ್ದಾರೆ. ನಾಳೆಯಿಂದ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ನೂರು ಜನ ತಿಂಡಿ ತೆಗೆದುಕೊಂಡು ಹೋಗಿದ್ದಾರೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ಗೆ ಒತ್ತಾಯ ಮಾಡುತ್ತಿಲ್ಲ. ಅವರ ಹೆಸರು ಫೋನ್ ನಂಬರ್ ಕೊಟ್ಟರೆ ಸಾಕು ಬರೆದುಕೊಂಡು ಎರಡು ಮೂರು ಪೊಟ್ಟಣ ಊಟ, ತಿಂಡಿ ಕೊಡುತ್ತಿದ್ದೇವೆ ಎಂದು ಗಾಯತ್ರಿನಗರ ಇಂದಿರಾ ಕ್ಯಾಂಟೀನ್ ಸಿಬ್ಬಂದಿಯೊಬ್ಬರು ತಿಳಿಸಿದರು.
ಕರಿಯಮ್ಮ ಮಾತನಾಡಿ, ಈಗ ಎಲ್ಲೂ ಕೆಲಸಕ್ಕೆ ಹೋಗ್ಲಿಕ್ಕೆ ಬಿಡ್ತಿಲ್ಲ, ಕಷ್ಟ ಆಗಿದೆ. ಮನೆ ಬಿಟ್ಟು ಆಚೆ ಹೋಗ್ತಿಲ್ಲ. ಇದ್ರಿಂದ ದುಡ್ಡಿಗೆ ತೊಂದ್ರೆ ಆಗಿದೆ. ಇವತ್ತೇ ಯಾರೋ ಹೇಳಿದ್ದರಿಂದ ಗೊತ್ತಾಯ್ತು. ಉಚಿತ ಊಟ ಕೊಡ್ತಿದ್ದಾರೆ ಎಂದು ಬಂದಿದ್ದೇವೆ. ಊಟ ಕೊಟ್ಟಿದ್ದಾರೆ. ಮೂರು ಜನಕ್ಕೆ ತಗೊಂಡು ಹೋಗ್ತಿದ್ದಿನಿ ಎಂದರು.
ಒಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಬಡವರ ಪಾಲಿಗೆ ವರದಾನವಾಗಿದೆ. ಕ್ಯಾಂಟೀನ್ನಲ್ಲಿ ಊಟ ಹಂಚುತ್ತಿರುವ ವ್ಯವಸ್ಥೆ ಕುರಿತು ಪರಿಶೀಲಿಸಲು ಸ್ವತಃ ಮುಖ್ಯ ಆಯುಕ್ತರು ಫೀಲ್ಡ್ಗಿಳಿಯಲಿದ್ದಾರೆ.
ಓದಿ: ದೇಶದಲ್ಲಿ 3.48 ಲಕ್ಷ ಜನರಿಗೆ ಕೋವಿಡ್ ದೃಢ, ಸೋಂಕಿತರಿಗೂ ಹೆಚ್ಚು ಗುಣಮುಖ