ಬೆಂಗಳೂರು: ಮತದಾನ ಪ್ರಮಾಣ ಕಡಿಮೆ ಇರುವ ನಗರ ಪ್ರದೇಶದಲ್ಲಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರಿನ ನೃಪತುಂಗದಲ್ಲಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್ ಮತದಾನದ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಹೌದು, ಮತ ಚಲಾಯಿಸಿದ ಪ್ರತಿಯೊಬ್ಬರಿಗೂ ಬೆಣ್ಣೆ ದೋಸೆ, ಸ್ವೀಟ್ ಹಾಗೂ ಜ್ಯೂಸ್ ಉಚಿತವಾಗಿ ನೀಡಲಾಗುತ್ತಿದೆ. ನೂರಾರು ಜನರು ಮತದಾನ ಮಾಡಿ ಈ ಹೋಟೆಲ್ಗೆ ಆಗಮಿಸಿ ಘಮಘಮಿಸೋ ದೋಸೆ ಸೇವಿಸುತ್ತಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಉಚಿತ ತಿಂಡಿ ವ್ಯವಸ್ಥೆ ಇದ್ದು, ಜನರು ಯಾವಾಗ ಬೇಕಾದರೂ ಬಂದು ವೋಟಿಂಗ್ ಮಾಡಿರೋ ಶಾಯಿ ಗುರುತು ತೋರಿಸಿ ಉಚಿತವಾಗಿ ತಿಂಡಿ ಪಡೆಯಬಹುದಾಗಿದೆ.
ಸದ್ಯ ಹೋಟೆಲ್ ನಿಸರ್ಗ ಗ್ರ್ಯಾಂಡ್ಗೆ ನಟ ರಮೇಶ್ ಭಟ್, ಮಥಾಯ್, ಮಹೇಶ್ ಜೋಷಿ, ನಟಿ ರೂಪಿಕಾ ಸೇರಿದಂತೆ ಹಲವರು ಆಗಮಿಸಿ ಬಿಸಿ ಬಿಸಿ ದೋಸೆ ತಿಂದು, ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.