ಬೆಂಗಳೂರು: ಇಲ್ಲೊಂದು ಹೋಟೆಲ್‌ಗೆ ನೀವು ವೋಟ್ ಮಾಡಿ ಬಂದು ಶಾಯಿ ಇರೋ ಬೆರಳು ತೋರಿಸಿದರೆ ಸಾಕು ನಿಮ್ಮ ಕೈಗೆ ಬಿಸಿಬಿಸಿ ಕಾಫಿ, ಬಾಯಲ್ಲಿ ನೀರೂಸರಿಸುವ ದೋಸೆ ಕೊಡುತ್ತೇವೆ ಅಂತಿದ್ದಾರೆ.
ಹೌದು, ಈ ಬಾರಿಯ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈಗಾಗಲೇ ಚುನಾವಣಾ ಆಯೋಗ ಸಾಕಷ್ಟು ಅಭಿಯಾನ, ಜಾಗೃತಿಗಳನ್ನು ಕೂಡ ಮಾಡುತ್ತಿದೆ. ಇದರೊಟ್ಟಿಗೆ ಮತದಾರರಿಗೆ ಉತ್ತೇಜನ ನೀಡಲು ಸಿಲಿಕಾನ್ ಸಿಟಿಯ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ಮಾಲೀಕರು ವಿಶೇಷವಾದ ಒಂದು ಆಫರ್ ಘೋಷಣೆ ಮಾಡಿದ್ದಾರೆ.
ಏಪ್ರಿಲ್ 18ರಂದು ನಡೆಯುವ ಚುನಾವಣೆಯಲ್ಲಿ ಮತದಾರರಿಗೆ ಬಿಸಿಬಿಸಿ ಬೆಣ್ಣೆ ಖಾಲಿ ದೋಸೆ, ಸಿಹಿ ತಿಂಡಿ ಹಾಗೂ ತಂಪು ಪಾನಕವನ್ನ ನೀಡಲು ನಿರ್ಧರಿಸಿದ್ದಾರೆ. ಅದು ಕೂಡ ಉಚಿತವಾಗಿ.
ಮಾಲೀಕರಾದ ಕೃಷ್ಣಾ ರಾಜ್ ಅವರನ್ನು ಏನ್ ಸರ್ ಇದರ ವಿಶೇಷ ಅಂದರೆ, ಅವರು ಹೇಳೋದು ಹೀಗೆ. ನಮ್ಮ ಹೋಟೆಲ್ನಲ್ಲಿ ಸಾಕಷ್ಟು ಕಾಲೇಜು ವಿದ್ಯಾರ್ಥಿಗಳು ಬರುತ್ತಾರೆ. ಅವರೆಲ್ಲರೂ ಕೂಡ ಮತದಾನದಿಂದ ಹಿಂದೆ ಉಳಿಯುವ ಮಾತುಗಳನ್ನು ಆಡುತ್ತಿದ್ದರು. ಆಗ ಮತದಾನ ಮಾಡಿ ತಪ್ಪಿಸಿಕೊಳ್ಳಬೇಡಿ ಅಂತ ಸಲಹೆ ನೀಡಿದ್ದರಂತೆ. ಅದಕ್ಕೆ ವಿದ್ಯಾರ್ಥಿಗಳು ನಾವು ವೋಟ್ ಮಾಡಿದರೆ ನೀವ್ ಏನು ಫ್ರೀಯಾಗಿ ಮಸಾಲೆ ದೋಸೆ ಕೊಡುತ್ತೀರಾ ಅಂತಾ ಕೇಳಿದ್ದಾರೆ. ಹಾಗಾಗಿ ಅವರನ್ನು ಮತದಾನ ಮಾಡುವಂತೆ ಪ್ರೇರೇಪಿಸಿಸಲು ಉಚಿತವಾಗಿ ನೀಡೋದಾಗಿ ಹೇಳಿದ್ದಾರೆ.
ಇನ್ನು ಚುನಾವಣೆ ಸಮಯದಲ್ಲಿ ನಮ್ಮ ಪಾರ್ಟಿಗೆ ವೋಟ್ ಮಾಡಿ ನಿಮಗೆ ಸ್ಯಾರಿ ಕೊಡ್ತೀವಿ, ಮನೆಗೆ ಮಿಕ್ಸಿ ಕೊಡ್ತೀವಿ ಅಂತ ಪುಂಗಿ ಬಿಡೋ ನಮ್ಮ ರಾಜಕಾರಣಿಗಳ ನಡುವೆ ನೀವು ಯಾವ ಪಕ್ಷಕ್ಕಾದ್ರು ವೋಟ್ ಮಾಡಿ ನಿಮಗೆ ನಮ್ಮ ಆತಿಥ್ಯ ಉಚಿತವಾಗಿ ನೀಡ್ತೀವಿ ಅಂತಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ವೋಟ್ ಮಾಡಿದ ಹೊಸ ಮತದಾರರು ತಮ್ಮ ಬೆರಳನ್ನು ತೋರಿಸಿದ್ರೆ ಸಾಕು ನಿಮಗೆ ಹೋಟೆಲ್ನಲ್ಲಿ ದೋಸೆ ಜೊತೆಗೆ ಜ್ಯುಸ್ ಫ್ರೀ. ಈ ಹೋಟೆಲ್ನಲ್ಲಿ ಹೊಸ ಮತದಾರರಿಗೆ ಮಾತ್ರ ಅತಿಥ್ಯವಲ್ಲ. ಮತದಾನ ಮಾಡಿ ಬರುವ ಎಲ್ಲಾ ಮತದಾರರಿಗೂ ಉಚಿತವಾಗಿ ಕೊಡಲಿದ್ದಾರೆ.
ಈ ಹಿಂದೆಯೂ ರಾಜ್ಯ ವಿಧಾನಸಭಾ ಚುನಾವಣಾ ವೇಳೆಯಲ್ಲೂ ಹೀಗೆ ಆಫರ್ ನೀಡಿದ್ದರು. ಈಗ ಲೋಕಸಭಾ ಚುನಾವಣೆಗೆ ಮತ್ತಷ್ಟು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.