ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರಿಗೆ 5 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಪಕ್ಷ ಬಳಿಕ ಅಧಿಕಾರದ ಗದ್ದುಗೆಯನ್ನೂ ಏರಿತು. ಈ ಗ್ಯಾರಂಟಿಗಳನ್ನು ಜಾರಿಗೆ ತರಲು ಇದೀಗ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೂ ಒಂದು. ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಉಚಿತ ಬಸ್ ಪ್ರಯಾಣ ಸೌಲಭ್ಯ ಎಲ್ಲ ಮಹಿಳೆಯರಿಗೆ ಯಾವುದೇ ಷರತ್ತು ಇಲ್ಲದೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು (ಬುಧವಾರ) ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಉಚಿತಗಳ ಜಾರಿ ಸಂಬಂಧ ಚರ್ಚೆ ನಡೆಯಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅದಾಗಲೇ ನಷ್ಟದಲ್ಲಿರುವ ರಸ್ತೆ ಸಾರಿಗೆ ನಿಗಮಗಳಿಗೆ ಗಾಯದ ಮೇಲೆ ಬರೆ ಎಂಬುದರಲ್ಲಿ ಎರಡು ಮಾತಿಲ್ಲ. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಮೇಲಿನ ಹೊರೆ ಇನ್ನಷ್ಟು ಹೆಚ್ಚಲಿದೆ.
3,600 ಕೋಟಿ ರೂ. ಹೆಚ್ಚುವರಿ ಹೊರೆ: ಉಚಿತ ಸರ್ಕಾರಿ ಬಸ್ ಪ್ರಯಾಣ ಯೋಜನೆಯಿಂದ ರಸ್ತೆ ಸಾರಿಗೆ ನಿಗಮಗಳ ಮೇಲೆ ವಾರ್ಷಿಕ ಒಟ್ಟು ಅಂದಾಜು 3,600 ಕೋಟಿ ರೂ. ಹೊರೆ ಬೀಳಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆ ಕೇವಲ ಸಾಮಾನ್ಯ ಸಾರಿಗೆ ಬಸ್ಗಳಿಗೆ ಮಾತ್ರ ಅನ್ವಯವಾಗಲಿದೆ. ಅದರಂತೆ 3,600 ಕೋಟಿ ರೂ. ಹೊರೆ ಬೀಳಲಿದೆ. ಈ ಸಂಬಂಧವೂ ಕೆಲ ನಿಬಂಧನೆಗಳನ್ನು ಹಾಕುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಅಂದಾಜು 83 ಲಕ್ಷ ಇದೆ. ಈ ಪೈಕಿ 45-50% ಪ್ರಯಾಣಿಕರು ಮಹಿಳೆಯರು ಎಂದು ಅಂದಾಜಿಸಲಾಗಿದೆ.
ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ: ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ ಈಗಾಗಲೇ ಅಧೋಗತಿಗೆ ಹೋಗಿದೆ. ರಸ್ತೆ ಸಾರಿಗೆ ನಿಗಮಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಅಂದಾಜು 83 ಲಕ್ಷ ಆಗಿದೆ. ಕೆಎಸ್ಆರ್ಟಿಸಿ ನಿತ್ಯ 9.79 ಕೋಟಿ ರೂ., ಎಂಟಿಸಿ ಸಂಸ್ಥೆ ನಿತ್ಯ 4.44 ಕೋಟಿ ರೂ. , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿತ್ಯ 4.73 ಕೋಟಿ ರೂ., ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿತ್ಯ 4.16 ಕೋಟಿ ರೂ. ಸಾರಿಗೆ ಆದಾಯ ಗಳಿಸುತ್ತದೆ.
2022-23 ಸಾಲಿನಲ್ಲಿ ನಾಲ್ಕು ನಿಗಮಗಳು ಒಟ್ಟು 8,946 ಕೋಟಿ ರೂ. ಸಾರಿಗೆ ಆದಾಯ ಹಾಗೂ ಇತರೆ ಆದಾಯವನ್ನು ಗಳಿಸಿದೆ. 2022-23 ಸಾಲಿನಲ್ಲಿ ಒಟ್ಟು 12,750 ಕೋಟಿ ರೂ. ಕಾರ್ಯಾಚರಣೆ ವೆಚ್ಚ ತಗುಲುತ್ತದೆ. ಆ ಮೂಲಕ ನಾಲ್ಕು ನಿಗಮಗಳು ಒಟ್ಟು 3,804 ಕೋಟಿ ರೂ. ಆದಾಯ ನಷ್ಟ ಅನುಭವಿಸುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ರಸ್ತೆ ಸಾರಿಗೆ ನಿಗಮ ಸತತವಾಗಿ ನಷ್ಟದಲ್ಲೇ ಕಾರ್ಯಾಚರಿಸುತ್ತಿವೆ.
ಇಲಾಖೆ ನೀಡಿದ ಅಂಕಿ ಅಂಶದಂತೆ ಕಳೆದ ಮೂರು ವರ್ಷ ಅಂದರೆ 2019-20 ರಿಂದ 2021-22 ವರೆಗೆ ನಾಲ್ಕು ಸಾರಿಗೆ ನಿಗಮಗಳು ನಷ್ಟ ಅನುಭವಿಸಿದ್ದವು. ಅದರಲ್ಲಿ ಕೆಎಸ್ಆರ್ಟಿಸಿ ಸುಮಾರು 1,162 ಕೋಟಿ ರೂ. ನಷ್ಟ ಅನುಭವಿಸಿದೆ. ಬಿಎಂಟಿಸಿ ಮೂರು ವರ್ಷದಲ್ಲಿ ಸುಮಾರು 891 ಕೋಟಿ ರೂ., ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 1,038 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸುಮಾರು 501.54 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ರಸ್ತೆ ಸಾರಿಗೆ ನಿಗಮಗಳು ಮಾಹಿತಿ ನೀಡಿವೆ.
5,500 ಕೋಟಿ ಬಿಲ್ ಬಾಕಿ: ರಸ್ತೆ ಸಾರಿಗೆ ನಿಗಮಗಳಿಗೆ ವಿವಿಧ ಸಹಾಯ ಧನದ ರೂಪದಲ್ಲಿ ಸರ್ಕಾರ ಸುಮಾರು 5,500 ಕೋಟಿ ರೂ. ಪಾವತಿಸಬೇಕಾಗಿದೆ. ಆ ಬಾಕಿ ಹಣವನ್ನು ಸರ್ಕಾರ ಪಾವತಿಸದೆ ಬಾಕಿ ಉಳಿಸಿ ಕೊಂಡಿದೆ. ಹೀಗಾಗಿ ಏರುತ್ತಿರುವ ಕಾರ್ಯಾಚರಣೆ ವೆಚ್ಚದಿಂದ ಸಾರಿಗೆ ನೌಕರರ ವೇತನ ಪಾವತಿ ಕಳೆದ ಒಂದು ವರ್ಷದಿಂದ ವಿಳಂಬವಾಗುತ್ತಿದೆ.
ಇತ್ತ ನಿರ್ಗಮಿತ ಬಿಜೆಪಿ ಸರ್ಕಾರ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ 15% ವೇತನ ಪರಿಷ್ಕರಣೆ ಮಾಡಿತ್ತು. ಅದರಿಂದ ಸಾರಿಗೆ ನಿಗಮಗಳ ಮೇಲೆ 1,800 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಉಚಿತ ಮಹಿಳಾ ಪ್ರಯಾಣಕ್ಕೆ ವಾರ್ಷಿಕ ಸುಮಾರು 3,600 ಕೋಟಿ ರೂ. ಅಂದಾಜಿಸಲಾಗಿದೆ. ಹೀಗಾಗಿ ಸೊರಗಿದ ರಸ್ತೆ ಸಾರಿಗೆ ನಿಗಮಗಳಿಗೆ ಈ ಉಚಿತಗಳು ಮಾರಕವಾಗುವುದು ಖಚಿತ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಶೇ.15ರಷ್ಟು ಹೆಚ್ಚಿಸಿ ಸರ್ಕಾರದ ಆದೇಶ