ಬೆಂಗಳೂರು: ರಾಜ ವಂಶಸ್ಥರ ಸೋಗಿನಲ್ಲಿ ಸಾಲ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ್ದ ಐವರು ಆರೋಪಿಗಳನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಮಾರ್, ಮನೋಜ್ ಕುಮಾರ್, ಆದಿತ್ಯ, ರಂಜಿತ್ ಹಾಗೂ ಶ್ರೀಕಾಂತ್ ಬಂಧಿತ ಆರೋಪಿಗಳು.
ಹೈದರಾಬಾದ್ ಮೂಲದ ಸಾಫ್ಟ್ವೇರ್ ಉದ್ಯಮಿ ನಾಗ ರಮಣೇಶ್ವರ್ ಎಂಬುವವರು ಬೆಂಗಳೂರಿನಲ್ಲಿ ತಮ್ಮ ಕಂಪನಿಯನ್ನ ವಿಸ್ತರಿಸುವ ಉದ್ದೇಶಕ್ಕೆ ಇಪ್ಪತ್ತು ಕೋಟಿ ಲೋನ್ ಪಡೆಯುವ ಪ್ರಯತ್ನದಲ್ಲಿದ್ದರು. ವಿಚಾರವನ್ನು ತಿಳಿದ ಆರೋಪಿ ಕುಮಾರ್ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಶಿಯರ್ ಬಳಿ ತಾನು ಸಾಲ ಕೊಡಿಸುವುದಾಗಿ ಮತ್ತೋರ್ವ ಆರೋಪಿ ಮನೋಜ್ ಕುಮಾರ್ನನ್ನು ಮೈಸೂರು ರಾಜವಂಶಸ್ಥ ಮನೋಜ್ ಅರಸು ಎಂದು ಪರಿಚಯಿಸಿದ್ದ. ಬಳಿಕ ನಿಮಗೆ ಬೇಕಾದಷ್ಟು ಫೈನಾನ್ಶಿಯಲ್ ಸಹಾಯ ಮಾಡುತ್ತಾರೆ. ಬೇಕಾದ 20 ಕೋಟಿಗೆ ಮುಂಗಡವಾಗಿ ಎರಡು ಕೋಟಿ ಕಮೀಷನ್ ನೀಡಬೇಕು ಅಂತಾ ನಂಬಿಸಿದ್ದ. ಅಲ್ಲದೆ ಒಂದು ಕೋಟಿಗೂ ಹೆಚ್ಚು ಹಣ ಪಡೆದಿದ್ದನಂತೆ.
ಆದರೆ ಹಣ ಪಡೆದ ಬಳಿಕ ಆರೋಪಿಗಳಿಬ್ಬರೂ ಲೋನ್ ಕೊಡಿಸದೆಯೆ ಸಬೂಬು ಹೇಳಿಕೊಂಡು ಕಾಲ ಕಳೆಯಲಾರಂಭಿಸಿದ್ದರು. ಅನುಮಾನ ಮೂಡಿ ಹೈದರಾಬಾದ್ನಲ್ಲಿ ಪೊಲೀಸ್ ಕಂಪ್ಲೈಂಟ್ ಕೊಡೋದಾಗಿ ಉದ್ಯಮಿ ರಮಣೇಶ್ವರ್ ಹೇಳಿದ್ದರು. ಎಚ್ಚೆತ್ತ ಆರೋಪಿಗಳು ಹಣ ಕೊಡುವುದಾಗಿ ರಮಣೇಶ್ವರ್ರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.
ಬಳಿಕ ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ರಮಣೇಶ್ವರ್ರನ್ನ ಬೂದಿಗೆರೆಗೆ ಬರಲು ಸೂಚಿಸಿದ್ದರು. ಅದರಂತೆ ಕ್ಯಾಬ್ ಬುಕ್ ಮಾಡಿ ಹೊರಟಿದ್ದ ರಮಣೇಶ್ವರ್ ಅವರನ್ನು ಮಾರ್ಗ ಮಧ್ಯೆ ಗೊಲ್ಲಹಳ್ಳಿ ಎಂಬಲ್ಲಿ ಕಾರು ಅಡ್ಡಗಟ್ಟಿ ತಡೆದು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ನಂತರ ರಮಣೇಶ್ವರ್ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಬಾಗಲೂರು ಪೊಲೀಸರು ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ದಲ್ಲಾಳಿ ಕುಮಾರ್, ರಾಜವಂಶಸ್ಥನೆಂದು ಹೇಳಿಕೊಂಡಿದ್ದ ಮನೋಜ್ ಹಾಗೂ ಹಲ್ಲೆ ನಡೆಸಿದ ಆರೋಪಿಗಳು ಸೇರಿದಂತೆ ಐವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು