ಬೆಂಗಳೂರು: ಬ್ಯಾಂಕ್ಗೆ ಕಟ್ಟಬೇಕಾದ ಲೋನ್ನಲ್ಲಿ ಡಿಸ್ಕೌಂಟ್ ಮಾಡಿಸಿ ಕೊಡ್ತಿನಿ ಎಂದು ನಂಬಿಸಿ, 82 ಲಕ್ಷ ರೂ. ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಸತೀಶನ್ ಎಂಬುವರು ವಂಚನೆಗೊಳಗಾಗಿದ್ದು, ಇವರು ನೀಡಿದ ದೂರನ್ನು ಆಧರಿಸಿ ರಾಘವ್ ಲಾಲ್ ಹಾಗೂ ಪಿಳ್ಳೈ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸಿವಿಲ್ ಕಾಂಟ್ರ್ಯಾಕ್ಟರ್ ಆಗಿರುವ ಸತೀಶನ್, ಎಸ್ಬಿಐ ಬ್ಯಾಂಕ್ನಲ್ಲಿ ಎರಡು ಕೋಟಿ ಸಾಲ ತೆಗೆದುಕೊಂಡಿದ್ದರು. ಕಾರಣಾಂತರದಿಂದ ಕಟ್ಟಲಾಗದೇ ಬಡ್ಡಿ ಸೇರಿ 10 ಕೋಟಿಯವರೆಗೆ ತಲುಪಿತ್ತು. ಇದರಿಂದ ಸಹಜವಾಗಿಯೇ ಸತೀಶನ್ ಕಂಗೆಟ್ಟಿದ್ದರು. ಈ ನಡುವೆ ಸಾಲದಲ್ಲಿ ಡಿಸ್ಕೌಂಟ್ ಕೊಡಿಸ್ತಿನಿ ಎಂದು ಈ ಇಬ್ಬರು ವಂಚಕರು ಹೇಳಿದ್ದಾರೆ. ಇನ್ನು ಕೇರಳ ಮೂಲದ ರಾಘವ್ ಲಾಲ್ ಹಾಗೂ ಪಿಳ್ಳೈ ಬ್ಯಾಂಕುಗಳಿಂದ ಸಾಲ ಪಡೆದಿದ್ದವರ ಡೇಟಾಗಳನ್ನು ಕಲೆಕ್ಟ್ ಮಾಡುತ್ತಿದ್ದರು.
ನಂತರ ಯಾರು ಅತಿ ಹೆಚ್ಚು ಸಾಲ ತೀರಿಸಬೇಕೋ ಅವರ ವಿಳಾಸ - ಫೋನ್ ನಂಬರ್ ಪಡೆದು ಭೇಟಿ ಮಾಡುತ್ತಿದ್ದರು. ಸಾಲ ಪಡೆದವರು ಎಷ್ಟು ಸಾಲ ತೆಗೆದುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ಬಳಿಕ ಇಬ್ಬರು ಆಡಿಟರ್ ಹಾಗೂ ಲೀಗಲ್ ಅಡ್ವೈಸರ್ ಎಂದು ಸುಳ್ಳು ಹೇಳಿ, ನಿಮ್ಮ ಸಾಲದಲ್ಲಿ ಡಿಸ್ಕೌಂಟ್ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು.
ಇದನ್ನೂ ಓದಿ: VIDEO: ಗೋಡೆಯಲ್ಲಿ ಅರ್ಧಕ್ಕೆ ಸಿಲುಕಿದ್ದ ನಾಗರಹಾವು ರಕ್ಷಣೆ
ಆದರೆ, ಕಮಿಷನ್, ಪ್ರೋಸೆಸ್ ಮಾಡುವ ಫೀಸ್ ಎಂದೆಲ್ಲಾ ಖರ್ಚಾಗುತ್ತೆ ಎಂದಿದ್ದರು. 10 ಕೋಟಿಯಲ್ಲಿ ಬಾರಿ ಡಿಸ್ಕೌಂಟ್ ಸಿಗೋದಾದರೆ ಫೀಸ್ಗಳೆಲ್ಲ ಮಾಮೂಲಿ ಎಂದರಿತ ಸತೀಶನ್, ಆರೋಪಿಗಳು ಕೇಳಿದಷ್ಟು ಹಣ ನೀಡುತ್ತಿದ್ದರು. ಹೀಗೆ ಸತೀಶನ್ ವಂಚಕರನ್ನ ನಂಬಿ ಹಂತ - ಹಂತವಾಗಿ 82 ಲಕ್ಷ ಹಣ ನೀಡಿದ್ದರು. ಸದ್ಯ ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.