ಬೆಂಗಳೂರು: ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ವಿಮಾ ಯೋಜನೆ ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಹೆಲ್ತ್ ಕಾರ್ಡ್ಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿರುವ ಮಾದರಿಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಜ್ಞರ ತಂಡ ರಚಿಸಿ ರಾಜಸ್ಥಾನ ಹಾಗೂ ತಮಿಳುನಾಡಿನಲ್ಲಿ ಆರೋಗ್ಯ ವಿಮೆ ಮಾದರಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ನಾಲ್ವರು ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಿದ್ದು, ಜುಲೈ 10 ರೊಳಗೆ ಅಧ್ಯಯನದ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ನೀವು 'ಆರೋಗ್ಯ ವಿಮೆ' ತೆಗೆದುಕೊಳ್ಳಲು ಬಯಸುವಿರಾ?: ಈ ಸಲಹೆಗಳನ್ನು ನೆನಪಿಡಿ
ಮೆಡಿಕಲ್ ಜಂಟಿ ನಿರ್ದೇಶಕಿ ಡಾ. ಭಾನುಮೂರ್ತಿ, ಎಮ್.ಎಮ್ ನಿರ್ದೇಶಕ ಡಾ. ಸುರೇಶ್ ಶಾಸ್ತ್ರಿ, ಎಂ.ಎಸ್ ರೂಪಾ, ಹಣಕಾಸು ವಿಭಾಗದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಟಿ ಅವರ ಹೆಸರುಗಳನ್ನು ಅಧ್ಯಯನ ತಂಡಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಈ ಅಧಿಕಾರಿಗಳ ತಂಡವು ಇದೇ ತಿಂಗಳ 27, 28 ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದು, ಜುಲೈ 6 ಮತ್ತು 7 ರಂದು ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿಯ ಆರೋಗ್ಯ ವಿಮಾ ಮಾದರಿಯ ಕುರಿತು ಅಧ್ಯಯನ ನಡೆಸಲಿದೆ. ಜುಲೈ 10 ರಂದು ರಾಜ್ಯ ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಸಲಿದೆ.
ವರದಿ ಸಲ್ಲಿಕೆಯ ಬಳಿಕ ರಾಜ್ಯದಲ್ಲಿರುವ ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆ ಹೆಚ್ಚು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮುಂದಾಗಲಿದ್ದಾರೆ. ಪ್ರಸ್ತುತ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ವಿಮೆ ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ. 64 ರಷ್ಟು ಹಣಕಾಸಿನ ನೆರವು ಒದಗಿಸುತ್ತಿದ್ದು, ಕೇಂದ್ರ ಸರ್ಕಾರದಿಂದ ಶೇ.34 ರಷ್ಟು ಮಾತ್ರ ಹಣಕಾಸಿನ ಲಭ್ಯತೆ ದೊರೆಯುತ್ತಿದೆ. ಈ ಯೋಜನೆಯ ಹೆಲ್ತ್ ಕಾರ್ಡ್ನಲ್ಲಿ ಚಿಕಿತ್ಸೆ ಪಡೆದ ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಎರಡು ವಾರದೊಳಗೆ ಚಿಕಿತ್ಸಾ ವೆಚ್ಚ ತಲುಪುವಂತೆ ವಿಧಾನ ಜಾರಿಗೆ ತರಲು ಆರೋಗ್ಯ ಸಚಿವರು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Health insurance: ನಗದುರಹಿತ ಆರೋಗ್ಯ ವಿಮೆಯಿಂದ ನಿಮಗೆಷ್ಟು ಪ್ರಯೋಜನ.. ಇಲ್ಲಿದೆ ಮಾಹಿತಿ!
ನಿರ್ಲಕ್ಷ್ಯ ವಹಿಸುವ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದ ಸಚಿವರು: ಈ ಮೊದಲು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಚಿವ ದಿನೇಶ್ ಗುಂಡೂರಾವ್ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯತನದಿಂದ ಸಾವು ನೋವು ಸಂಭವಿಸಿದರೆ ಸಹಿಸಿಕೊಳ್ಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಮಾನವೀಯ ದೃಷ್ಠಿಕೋನದಿಂದ ಸ್ಪಂದಿಸಿ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ವೇಳೆ ಯಾರೂ ನಿರ್ಲಕ್ಷ್ಯ ತೋರಬಾರದು ಎಂದು ತಿಳಿಸಿದ್ದರು.