ಬೆಂಗಳೂರು : ನ್ಯಾಯಾಂಗದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸೇರಿದಂತೆ ಜನರಲ್ಲಿ ನ್ಯಾಯಾಂಗದ ಕುರಿತು ನಂಬಿಕೆ ವಿಶ್ವಾಸಗಳನ್ನು ಮೂಡಿಸಲು ನ್ಯಾಯಾಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಗೆ ತಿಳಿಸುವುದು ಕೆಲ ವರ್ಷಗಳ ಹಿಂದೆ ಚಾಲ್ತಿಯಲ್ಲಿತ್ತು.
ಪ್ರಸ್ತುತ ಹೈಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸಿದ್ದಾರೆ. ಹೈಕೋರ್ಟ್ನ ವೆಬ್ಸೈಟ್ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ಅರವಿಂದ್ ಕುಮಾರ್, ಬಿ. ವೀರಪ್ಪ ಹಾಗೂ ಜಿ ನರೇಂದರ್ ಅವರು ತಮ್ಮ ಆಸ್ತಿ ವಿವರಗಳ ಮಾಹಿತಿ ಹಂಚಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ..
ಸುಪ್ರೀಂ ಕೋರ್ಟ್ನ 26 ಮಂದಿ ನ್ಯಾಯಮೂರ್ತಿಗಳ ಪೈಕಿ ಸಿಜೆಐ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎ.ಎಂ ಖಾನ್ವಿಲ್ಕರ್, ಅಶೋಕ್ ಭೂಷಣ ಅವರು ತಮ್ಮ ಆಸ್ತಿ ಕುರಿತು ಸುಪ್ರೀಂ ಕೋರ್ಟ್ ವೆಬ್ ಸೈಟ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಓದಿಗೆ : ಕೇವಲ 500 ರೂಪಾಯಿಯಲ್ಲಿ ಮದುವೆಯಾದ ಆರ್ಮಿ ಮೇಜರ್, ಸಿಟಿ ಮ್ಯಾಜಿಸ್ಟ್ರೇಟ್
ಆಸ್ತಿ ವಿವರ ಘೋಷಣೆ ಸ್ವಯಂ ಪ್ರೇರಿತ :
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳಬೇಕೆಂಬ ಯಾವುದೇ ಕಾನೂನು ದೇಶದಲ್ಲಿಲ್ಲ. ಆದರೆ, ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ 1997ರಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಮೂರ್ತಿಗಳ ಸಭೆಯಲ್ಲಿ ಈ ಕುರಿತು ನಿರ್ಣಯವೊಂದನ್ನು ಕೈಗೊಳ್ಳಲಾಗಿತ್ತು. ಅದರಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ನ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಹಾಗೂ ಸಾಲದ ವಿವರಗಳನ್ನು ಸಾರ್ವಜನಿಕಗೊಳಿಸಲು ಮುಂದಾಗಿ, ಕೋರ್ಟ್ ವೆಬ್ ಸೈಟ್ಗಳಲ್ಲಿ ವಿವರ ಹಂಚಿಕೊಳ್ಳುತ್ತಿದ್ದರು.
ಅದೇ ರೀತಿ 2009ರ ಆಗಸ್ಟ್ ನಲ್ಲಿಯೂ ಇದೇ ರೀತಿ ಮತ್ತೊಂದು ನಿರ್ಣಯ ಕೈಗೊಳ್ಳುವ ಮೂಲಕ ದೇಶದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದರು. 2010ರಲ್ಲಿ ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುವ ಮೂಲಕ ಮಾದರಿಯಾಗಿದ್ದರು.
ಪ್ರತಿ ನ್ಯಾಯಮೂರ್ತಿಯೂ ಆಸ್ತಿ ವಿವರ ಸಲ್ಲಿಸುತ್ತಾರೆ :
ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಅವರನ್ನು ವಿಚಾರಿಸಿದರೆ, ನ್ಯಾಯಮೂರ್ತಿಗಳೆಲ್ಲರೂ ತಮ್ಮ ಆಸ್ತಿ ಕುರಿತು ಮುಖ್ಯ ನ್ಯಾಯಮೂರ್ತಿಗಳಿಗೆ ವಿವರ ಸಲ್ಲಿಸುತ್ತಾರೆ. ಆದರೆ, ಆಸ್ತಿ ವಿವರ ಬಹಿರಂಗಪಡಿಸುವುದು ಆಯಾ ನ್ಯಾಯಮೂರ್ತಿಗಳ ಐಚ್ಛಿಕ ವಿಚಾರ. ಹೀಗಾಗಿ ಹೈಕೋರ್ಟ್ ವೆಬ್ ಸೈಟ್ ನಲ್ಲಿ ಮಾಹಿತಿ ಲಭ್ಯವಿಲ್ಲ ಎನ್ನುತ್ತಾರೆ.