ಕಲಬುರಗಿ : ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರ ಕಾರ್ ಅಪಘಾತಕ್ಕೀಡಾಗಿದೆ. ರಾತ್ರಿ ನಗರದ ಆಕಾಶವಾಣಿ ಕೇಂದ್ರದ ಬಳಿ ಅಪಘಾತ ಸಂಭವಿಸಿದೆ. ಚಿಂಚನಸೂರ ಅವರ ಮುಖ ಮತ್ತು ಕಾಲುಗಳಿಗೆ ಗಾಯವಾಗಿದ್ದು, ಸ್ಥಳೀಯರು ನಗರದ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂಚನಸೂರ್ ಅವರ ಜೊತೆಯಲ್ಲಿದ್ದ ಗನ್ ಮ್ಯಾನ್ ಮತ್ತು ಚಾಲಕರಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ.
ಗಾಯಾಳು ಬಾಬುರಾವ್ ಚಿಂಚನಸೂರ್ಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಬುರಾವ್ ಚಿಂಚನಸೂರ್ ಎರಡು ಕಾಲುಗಳು ಫ್ರಾಕ್ಚರ್ ಆಗಿದ್ದು, ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೀಗಾಗಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ರೆಡಿ ಮಾಡಿಕೊಳ್ಳುತ್ತಿದ್ದಾರೆ.
ಚಿಂಚನಸೂರ್ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶುಕ್ರವಾರ ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿಯತ್ತ ಪ್ರಯಾಣಿಸುತ್ತಿದ್ದರು. ರಾತ್ರಿ ಸುಮಾರು 1 ಗಂಟೆಗೆ ನಗರಕ್ಕೆ ಎಂಟ್ರಿ ಕೊಟ್ಟ ಅವರು ಆಕಾಶವಾಣಿ ಕೇಂದ್ರ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಕೂಡಲೇ ಸ್ಥಳೀಯರ ಕಾರಿನ ಬಳಿ ದೌಡಾಯಿಸಿ ಗಾಯಾಳುಗಳನ್ನು ಹೊರ ತೆಗೆದು ನೋಡಿದಾಗ ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರು ಎಂದು ತಿಳಿದು ಬಂದಿದೆ.
ಇನ್ನು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಅಷ್ಟೋತ್ತಿಗಾಗಲೇ ಸ್ಥಳೀಯರು ಆಂಬ್ಯುಲೆನ್ಸ್ನಲ್ಲಿ ಚಿಂಚನಸೂರು ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಅಪಘಾತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾರ್ನಲ್ಲಿ ಇಬ್ಬರು ಚಾಲಕರು, ಓರ್ವ ಗನ್ ಮ್ಯಾನ್ ಸೇರಿದಂತೆ ನಾಲ್ಕು ಜನರು ಪ್ರಯಾಣಿಸುತ್ತಿದ್ದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.
ಓದಿ: ಮಡಿಕೇರಿಯಲ್ಲಿ ಕಾರು-ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ: 6 ಜನ ಸಾವು
ಶುಕ್ರವಾರದಂದು ರಾಜ್ಯದಲ್ಲಿ 15 ಜನ ಸಾವು: ರಾಜ್ಯದ ವಿವಿಧೆಡೆ ನಡೆದ ಅಪಘಾತ ಮತ್ತು ಆಕಸ್ಮಿಕ ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಇಲ್ಲಿನ ಹಿರೇಹಳ್ಳಿ ಸಮೀಪ ಘಟನೆ ಸಂಭವಿಸಿದ್ದು, ತುಮಕೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ಎದುರುನಿಂದ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇನೋವಾ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಮಡಿಕೇರಿಯತ್ತ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಆರು ಜನ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರೆಲ್ಲ ಮೂಲತಃ ಮಂಡ್ಯ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ಈಜಲು ಹೋಗಿದ್ದ ನಾಲ್ವರು ಸ್ನೇಹಿತರು ಘಟಪ್ರಭಾ ನದಿಯಲ್ಲಿ ಮುಳುಗಿ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದೂಪದಾಳ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಮೃತಪಟ್ಟ ನಾಲ್ವರು ಯುವಕರು ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರು ಎಂಬ ಮಾಹಿತಿ ಲಭ್ಯವಾಗಿದೆ.