ವಿಜಯಪುರ: ಮಧ್ಯರಾತ್ರಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಹಾಗೂ ಬಬಲೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಸಂತೋಷ ಪ್ರಹ್ಲಾದ್ ಚವ್ಹಾಣ ಹಾಗೂ ಕಿರಣ ನಾಮದೇವ ಕಾಳೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನಿನ್ನೆ ಮುಚ್ಚಂಡಿಯ ದರಿದೇವರ ಗುಡಿ ಹತ್ತಿರ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ ಮಹಾರಾಷ್ಟ್ರ ಮೂಲದ ಜತ್ತ ತಾಲೂಕಿನ ಪಾರದಿ ತಾಂಡಾದ ಕಿಶನ ರತನ್ ಚವ್ಹಾಣ ಹಾಗೂ ರೋಹಿತ್ ತಾನಾಜಿ ಚವ್ಹಾಣನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಹಾಗೂ ಈ ವರ್ಷದ ಐದು ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದು, ಬಂಧಿತರಿಂದ 100 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ಕಾರು ಸೇರಿ 9.75ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಇವರು ಬಾಗಲಕೋಟೆ ಜಿಲ್ಲೆ, ಮುದ್ದೇಬಿಹಾಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತ ಕಳ್ಳರು ರಾತ್ರಿ 2 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯೊಳಗೆ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.
ಸ್ನಾನಕ್ಕೆ ಹೋಗಿದ್ದ ವ್ಯಕ್ತಿ ನೀರು ಪಾಲು!
ಕಾಲುವೆಯಲ್ಲಿ ಸ್ನಾನಕ್ಕೆ ಹೋಗಿದ್ದ ವ್ಯಕ್ತಿ ನೀರುಪಾಲಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಮೊರಟಗಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಮೂಲತಃ ಮಧ್ಯಪ್ರದೇಶ ನಿವಾಸಿಯಾಗಿದ್ದ ಮಹೇಶ ಮೊರಟಗಿ ಗ್ರಾಮದ ಖಾಸಗಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಸ್ನಾನ ಮಾಡಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.