ಬೆಂಗಳೂರು: ಕೊರೊನಾ ಜೀವರಕ್ಷಕ ಎನ್ನಲಾಗುವ ರೆಮ್ಡಿಸಿವಿರ್ ಚುಚ್ಚುಮದ್ದುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸುಬ್ರಹ್ಮಣ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಜ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದ್ದು, 12 ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಆಸ್ಪತ್ರೆಗೆ ಬರುವ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ಅಕ್ರಮವಾಗಿ ತೆಗೆದಿರಿಸಿಕೊಂಡು ಕೊರೊನಾ ರೋಗಿಗಳ ಕುಟುಂಬಸ್ಥರನ್ನು ಸಂಪರ್ಕಿಸಿ ಸಾವಿರಾರು ರೂಪಾಯಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆಯ ದಾರಿ ಕಂಡುಕೊಂಡಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದೆ.
ಕಳೆದ 20 ದಿನಗಳ ಅಂತರದಲ್ಲಿ ಇದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 50ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.