ಬೆಂಗಳೂರು: ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ನಾವು ಸಾಕಷ್ಟು ಮಾಡಿಕೊಂಡಿದ್ದೇವೆ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೂರು, ನಾಲ್ಕು ತಲೆಮಾರಿಗೆ ಆಗುವಷ್ಟು ನಾವು ಮಾಡಿಕೊಂಡಿದ್ದೇವೆ. ಇದೀಗ ನಮಗೆ ಋಣ ತೀರಿಸುವ ಕಾಲ ಕೂಡಿ ಬಂದಿದೆ. ಜಾರಿ ನಿರ್ದೇಶನಾಲಯದ ವಿಚಾರಣೆ ನೆಪದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕಿಗೆ ಕೇಂದ್ರ ಸರ್ಕಾರ ಅನಗತ್ಯ ಕಿರುಕುಳ ನೀಡುತ್ತಿದೆ.
ಅಲ್ಲದೇ ದೇಶ ಉಳಿಯಬೇಕಾದರೆ ಕಾಂಗ್ರೆಸ್ ಉಳಿಯಬೇಕು. ಸಣ್ಣತನವನ್ನು ಬಿಡೋಣ, ನೀಚತವನ್ನು ಬಿಡೋಣ, ಚಾಡಿಕೋರತನ ಬಿಡೋಣ. ಋಣ ತೀರಿಸಿಲ್ಲ ಎಂದರೆ, ತಿನ್ನುವ ಅನ್ನದಲ್ಲಿ ಹುಳ ಬೀಳುತ್ತೆ ಎಂದು ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧವೇ ಮಾತಿನ ಚಾಟಿ ಬೀಸಿದ ರಮೇಶ್ ಕುಮಾರ್, ಪಕ್ಷದ ಆಂತರಿಕ ಕಚ್ಚಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ದೇಶ ಉಳಿಬೇಕಾದರೆ ಕಾಂಗ್ರೆಸ್ ಉಳಿಯಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ. ಸೋನಿಯಾ ಗಾಂಧಿಗೆ ನೈತಿಕವಾಗಿ ಸಮಾಧಾನವಾಗಬೇಕು. ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ. ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ನೀಡಿದೆ. ಕಾಂಗ್ರೆಸ್ ಇಡೀ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ.
ಆದರೆ, ಸೋನಿಯಾ ಗಾಂಧಿ ಕಾನೂನಿಗಿಂತ ದೊಡ್ಡವರಾ ಎಂದು ಬಿಜೆಪಿಯವರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸುತ್ತೇನೆ ಎಂದ ಅವರು, ನಿಮ್ಮ ಪೂರ್ವಿಕರಾದ ಆರ್‌ಎಸ್‍ಎಸ್‍ನವರು, ಹಿಂದೂ ಮಹಾಸಭಾದವರು, ಜನಸಂಘದವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರಾ? ಎಂದು ಮರು ರಮೇಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಓದಿ : ಬೆಂಗಳೂರು ED ಕಚೇರಿ ಮುಂದೆ 'ಕೈ' ಪ್ರತಿಭಟನೆ.. ಎರಡು ಕಾರುಗಳಿಗೆ ಬೆಂಕಿ, 11 ಜನ ಪೊಲೀಸ್ ವಶಕ್ಕೆ